Index   ವಚನ - 89    Search  
 
ಕರುವಿನ ರೂಪಿಂಗೆ ಒಳಗೊಂದು ಹೊರಗೊಂದಲ್ಲದೆ ಪರುಷದ ರೂಪಿಂಗೆ ಒಳಗೊಂದು ಹೊರಗೊಂದುಂಟೆ? ಅಲ್ಲ, ನಿಲ್ಲು, ಮಾಣು, ಪರೀಕ್ಷಿಸಿ ನೋಡಾ. ಪಂಚಭೂತಸಮ್ಮಿಶ್ರನಾದಡೆ ದೇವ ದಾನವರೊಳಗಾದ ಪ್ರಕೃತಿಕಾಯವಾದಾ ತನುವಿಂಗೆ ಒಳಗೊಂದು ಹೊರಗೊಂದು ಅದೂ ಕ್ರಿಯಾಕರ್ಮ ಬೇರೆ ದ್ವಂದ್ವಗ್ರಸ್ತವಾಗಿಹುದು. ಆಪ್ರಕಾರವಲ್ಲ ನೋಡಾ. ಗುರುಲಿಂಗಜಂಗಮ ಪ್ರಸನ್ನವಾದ ಪ್ರಸಾದಕಾಯ ಮಹಾಜ್ಞಾನತನು ಪ್ರಾಣಲಿಂಗ ಸ್ವಾಯತವಾಗಿಪ್ಪ ಘನತರ ಶಿವಲಿಂಗಮೂರ್ತಿ ಸರ್ವಾಂಗಲಿಂಗ ಮೂರ್ತಿಯ ಪರೀಕ್ಷಿಸಿ ನೋಡಿ, ಇಂತು ಸದ್ಗುರುಸ್ವಾಮಿ ಪ್ರಾಣಲಿಂಗಪ್ರತಿಷ್ಠೆಯಂ ಎಂದು ಮಾಡಿದನೋ ಅಂದೇ ಐಕ್ಯನು, ಅಂದೇ ಶರಣನು, ಅಂದೇ ಪ್ರಾಣಲಿಂಗಿ, ಅಂದೇ ಪ್ರಸಾದಿ, ಅಂದೇ ಮಾಹೇಶ್ವರ, ಅಂದೇ ಭಕ್ತನು. ಇಂದಿನ್ನಾವುದು ಹೊಸತಲ್ಲ ನೋಡಾ. ಗುರುಲಿಂಗಜಂಗಮಕ್ಕೆ ತ್ರಿವಿಧಭಕ್ತಿಯ ಮಾಡುತ್ತಿಪ್ಪ ಭಕ್ತನಾಗಿಪ್ಪನು. ಪರಧನ ಪರಸ್ತ್ರೀ ಪರದೈವಂಗಳ ಬಿಟ್ಟು ಮಾಹೇಶ್ವರನಾಗಿಪ್ಪನು. 'ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತವತ್ಸಲಃ ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್' ಎಂಬುದನರಿದು, ಈ ತ್ರಿವಿಧವನೂ ಗುರುಲಿಂಗಜಂಗಮಕ್ಕೆ ಅರ್ಪಿಸಿ ನಿರಂತರ ಪ್ರಸಾದವನವಗ್ರಹಿಸಿ ಭಕ್ತಕಾಯ ಮಮಕಾಯವೆಂಬೀ ವಾಕ್ಯದಲೂ ತನು ಶಿವತನುವೆಂದರಿದು ಸದ್ಗುರು ಪ್ರಾಣಲಿಂಗವನೇಕೀಭವಿಸಿದ ಲಿಂಗವೇ ಪ್ರಾಣವೆಂಬುದರಿದ ಬಳಿಕ ಪ್ರಾಣಲಿಂಗವೆಂದರಿದು, ಒಳಗು ಹೊರಗೆಂದರಿಯದೆ ಸರ್ವಾಂಗಲಿಂಗವೆಂದರಿದು, ಪ್ರಾಣಮಯ ಶಿವನೆಂದರಿದು ತತ್ವಮಯಶಿವನೆಂದರಿದು, ಸರ್ವಕ್ರಿಯಾಕರ್ಮಂಗಳೆಲ್ಲವನೂ ಶಿವಕ್ರೀ ಎಂದರಿದು ಕರಣಂಗಳೆಲ್ಲವೂ ಶಿವಕರಣಂಗಳೆಂದರಿದು ಶಿವಪ್ರೇರಣೆಯಿಂದ ಬಂದ ಪದಾರ್ಥಂಗಳೆಲ್ಲವೂ ಸರ್ವಶುದ್ಧ ಎಂದರಿದು ಶಿವಹಸ್ತದಲ್ಲಿ ಶಿವಾರ್ಪಿತವಂ ಮಾಡಿ ರೂಪನರ್ಪಿಸಿ ಶಿವಜಿಹ್ವೆಯಲ್ಲಿ ಶಿವಾರ್ಪಿತವಂ ಮಾಡಿ ರುಚಿಯನರ್ಪಿಸಿ ಅರ್ಪಿಸಿದೆನೆಂದೆನ್ನದೆ, ಶಿವಕ್ರೀ ಎಂದರಿದು ಮಹಾಜ್ಞಾನ ಪರಿಣಾಮಪ್ರಸಾದವ ನಿರಂತರ ಗ್ರಹಿಸುವನು. ಮನೋವಾಕ್ಕಾಯದಲ್ಲಿ ಮಿಥ್ಯವ ಕಳೆದು ಜಂಗಮಲಿಂಗಕ್ಕೆ ಅಷ್ಟಭೋಗಂಗಳ ಸಲಿಸಿ ಪ್ರಸನ್ನತೆಯಂ ಪಡೆದು ಪ್ರಸನ್ನಪ್ರಸಾದವ ಪ್ರಸಾದಿಯಾಗಿ ಗ್ರಹಿಸು[ವನು]. ಅಲಸುಗಾರನ ಭಕ್ತಿ ಅದ್ವೈತವೆಂಬ ವಾಕ್ಯಕ್ಕಂಜಿ ಸರ್ವಕ್ರೀಯಲ್ಲಿ ಎಚ್ಚತ್ತು ನಡೆವನು. ಪ್ರಾಣ ಲಿಂಗವೆಂದರಿದು, ಪ್ರಾಣಲಿಂಗಿಯಾಗಿ ಸುಖ ದುಃಖ ಭಯಾದಿ ದ್ವಂದ್ವಕರ್ಮಂಗಳು ನಾಸ್ತಿಯಾಗಿಪ್ಪನು. ಸರ್ವಕ್ರಿಯಾಕರ್ಮಂಗಳೆಲ್ಲವನೂ ಲಿಂಗದಲ್ಲಿ ಇರಿಸಿ, ಧರಿಸಿ, ಸುಖಿಸಿ, ಶರಣನಾಗಿಪ್ಪನು. ಸರ್ವಕ್ರೀಯಲ್ಲಿ ನಡೆದು ತನುಮನಧನವ ಸವೆಸಿ ಮಹಾಜ್ಞಾನವಳವಟ್ಟು, ನಿಸ್ಸಂಗಿಯಾಗಿ ಸರ್ವಕ್ರೀಯನೇಕೀಭವಿಸಿ ಕ್ರಿಯಾನಾಸ್ತಿಯಾಗಿ ಐಕ್ಯನಾಗಿಪ್ಪನು. ಕ್ರಿಯಾಕ್ರಿಯೆ ಅಂದು ಇಂದು ಎಂದೂ ಒಂದೇ ಪರಿಯಯ್ಯಾ. ಈ ವಿಚಾರ ಒಮ್ಮಿಂದೊಮ್ಮೆ ಅರಿಯಬಾರದು. ಅರಿಯದಿದ್ದರೇನು? ಬಾಲ್ಯದಲ್ಲಿ ಸತಿಪತಿಗಳೂ ಮಾತಾಪಿತರುಗಳು ವಿವಾಹವ ಮಾಡುವಲ್ಲಿ ಒಮ್ಮಿಂದೊಮ್ಮೆ ಬಾಲಕ್ರಿಯಾಕರ್ಮ ರತಿಸುಖವನರಿಯಬಾರದು. ಅರಿಯದಿದ್ದರೇನು? ಬಾಲ್ಯ ಸತಿಪತಿಗಳಲ್ಲಿ ಮುಂದೆ ಯೌವನದಲ್ಲಿ ಕ್ರಿಯಾಕರ್ಮಕರದಿ ಸುಖವನರಿವಂತೆ ಶಿವಾಚಾರ ಸರ್ವಕ್ರಿಯಾ ಸಂಪನ್ನತ್ವವನೂ, ಮಹಾನುಭಾವರ ಸಂಗದಿಂದಲರಿಯಬಹುದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.