Index   ವಚನ - 111    Search  
 
ಗುರುಸ್ವರೂಪನಾಗಿ ಮಹಾಸ್ಥಾನದಲ್ಲಿರುತ್ತಿದ್ದೆ, ಲಿಂಗಸ್ವರೂಪನಾಗಿ ಭ್ರೂಮಧ್ಯದಲ್ಲಿರುತ್ತಿದ್ದೆ, ಜಂಗಮಸ್ವರೂಪನಾಗಿ ಹೃದಯಕಮಲಮಧ್ಯದಲ್ಲಿರುತ್ತಿದ್ದೆ, ಈ ಪರಿಯಲ್ಲಿ ಅಂತರಂಗದಲ್ಲಿ ಭರಿತನಾಗಿದ್ದೆಯಯ್ಯಾ. ಬಹಿರಂಗದಲ್ಲಿ, ಶ್ರೀಗುರುಲಿಂಗವಾಗಿ ದೀಕ್ಷಿಸಿ ರಕ್ಷಿಸಿದೆ, ಶಿವಲಿಂಗವಾಗಿ ಕರಸ್ಥಲದಲ್ಲಿ ಪೂಜೆಗೊಂಡು ರಕ್ಷಿಸಿದೆ, ಜಂಗಮಲಿಂಗವಾಗಿ ಅವಗುಣಂಗಳೆಲ್ಲವನೂ ಕಳೆದು ಶಿಕ್ಷಿಸಿ ರಕ್ಷಿಸಿದೆ. ಇಂತೀ ತ್ರಿವಿಧವು ಒಂದೇ ರೂಪಾಗಿ, ಎನ್ನ ಅಂತರಂಗಬಹಿರಂಗಭರಿತನಾಗಿ ಪ್ರಸಾದವ ಕರುಣಿಸಿ ಮುಕ್ತನ ಮಾಡಿದೆಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.