Index   ವಚನ - 122    Search  
 
ಜಗದೊಳಗೆ ಸೂರ್ಯನಂತಿರ್ಪನಯ್ಯ ಶಿವನು. ಲೋಕಾದಿ ಲೋಕಂಗಳೊಳಗಿರ್ದಡೇನು, ಜಗದ ಪುಣ್ಯ, ಪಾಪ, ಸ್ವರ್ಗ, ನರಕ, ಬಂಧ, ಮೋಕ್ಷಕ್ಕೊಳಗಾದಾತನೇ ಅಲ್ಲ. ಅದೆಂತೆಂದಡೆ, ಜಲದೊಳಗಣ ಪ್ರಕೃತಿ ವಿಕೃತಿಗಳು ಜಲಕ್ಕಲ್ಲದೆ ಸೂರ್ಯಂಗಿಲ್ಲವಾಗಿ, ಲೋಕದ ಸ್ಥಿತಿಗತಿ ಲೋಕಕ್ಕಲ್ಲದೆ, ಶಿವನಿಗಿಲ್ಲವಾಗಿ. ಅನಂತಕೋಟಿ ಬ್ರಹ್ಮಾಂಡಗಳು ತನ್ನ ಒಡಲೊಳಗೆ ಅಡಗಿದವೆಂದಡೆ ತಾ ಹೊರಗಾಗಿ ಅಡಗಲೆಡೆ ಏನುಂಟು? ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ವಿಶ್ವದೊಳಗೆ ಹೊದ್ದಿಯೂ ಹೊದ್ದದಿರಬಲ್ಲ, ವಿಶ್ವಾಧಿಪತಿಯಾಗಲೂ ಬಲ್ಲ.