Index   ವಚನ - 133    Search  
 
ತನ್ನ ತಾನರಿಹವೇ ಪರಮಾತ್ಮಯೋಗ, ತನ್ನ ತಾಮರಹವೇ ಮಾಯಾಸಂಬಂಧ. ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ಪರಮಾತ್ಮನು ಪರಬ್ರಹ್ಮಸ್ವರೂಪನು, ನಿತ್ಯ, ನಿರಂಜನ, ಉಪಮಾತೀತ ನಿಷ್ಪತಿ, ಕೇವಲ ನಿಷ್ಕಲಸ್ವರೂಪನು. ಭ್ರೂಮಧ್ಯದಲ್ಲಿ ಪರಮಾತ್ಮನೇ ಅಂತರಾತ್ಮನೆನಿಸಿ ಸಕಲ ನಿಷ್ಕಲನಾಗಿಪ್ಪ. ಹೃದಯಸ್ಥಾನದಲ್ಲಿ ಆ ಪರಮಾತ್ಮನೇ ಜೀವಾತ್ಮನಾಗಿ ಕೇವಲ ಸಕಲನಾಗಿಪ್ಪ. ಬ್ರಹ್ಮರಂಧ್ರಸ್ಥಾನದಲ್ಲಿ ನಿಷ್ಕಳಗುರುಮೂರ್ತಿರ್ಲಿಂಗ ಭ್ರೂಮಧ್ಯದಲ್ಲಿ ಸಕಲನಿಷ್ಕಲ ಪರಂಜ್ಯೋತಿರ್ಲಿಂಗ ಹೃದಯಸ್ಥಾನದಲ್ಲಿ ಕೇವಲ ಸಕಲ ಜಂಗಮಲಿಂಗ ಇಂತು ಪರಮಾತ್ಮನೇ ಪರಬ್ರಹ್ಮ, ಪರಮಾತ್ಮನೇ ಅಂತರಾತ್ಮ, ಪರಮಾತ್ಮನೇ ಜೀವಾತ್ಮ. ಬಹಿರಂಗದಲ್ಲಿ ಪರಮಾತ್ಮನೇ ಗುರುಲಿಂಗ, ಪರಮಾತ್ಮನೇ ಶಿವಲಿಂಗ ಪರಮಾತ್ಮನೇ ಜಂಗಮಲಿಂಗ. ಇಂತು, ಪರಮಾತ್ಮನೇ ಪರಬ್ರಹ್ಮ, ಪರಮಾತ್ಮನೇ ಸರ್ವಾತ್ಮ, ಪರಮಾತ್ಮನೇ ಸರ್ವಗತ, ಪರಮಾತ್ಮನೇ ಆತ್ಮಗತ. ಇದು ಕಾರಣ, ಪರಮಾತ್ಮನೇ ಅಂತರಂಗ, ಬಹಿರಂಗಭರಿತ ಪ್ರಾಣಲಿಂಗ. ಇಂತು ಅರಿವುದೇ ಪರಮಾತ್ಮಯೋಗ, ಮರವೇ ಮಾಯಾ ಸಂಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.