ನಾನಾ ಪ್ರಯತ್ನದಿಂದ ಹೊನ್ನನಾರ್ಜಿಸುವಂತೆ,
ನಾನಾ ಪ್ರಯತ್ನದಿಂದ ಹೊನ್ನ ಸುರಕ್ಷಿತವ ಮಾಡುವಂತೆ,
ನಾನಾ ಪ್ರಯತ್ನದಿಂದ ಬೇಡಿದವರಿಗೆ ಕೊಡದೆ
ಲೋಭವ ಮಾಡಿ ಸ್ನೇಹಿಸುವಂತೆ,
ನಾನಾ ವಿಧದಿಂದ ವಿಚಾರಿಸಿ
ವಿಚಾರಿಸಲು ಪ್ರಾಣವೇ ಹೊನ್ನೆಂಬಂತೆ,
ನಾನಾ ಪರಿಯಲು ಮನ ಬುದ್ಧಿ ಚಿತ್ತಹಂಕಾರಂಗಳು
ಪಂಚೇಂದ್ರಿಯಂಗಳು ಪ್ರಾಣವನು ಅವಗ್ರಹಿಸಿಕೊಂಡಿಪ್ಪಂತೆ
ಶಿವಲಿಂಗವನು ಅವಗ್ರಹಿಸಿಕೊಂಡಿರಬೇಕು. ಏಕೆ?
ಆ ಹೊನ್ನೇ ಶಿವನಾದ ಕಾರಣ,
`ಓಂ ನಮೋ ಹಿರಣ್ಯಬಾಹವೇ ಸೇನಾನ್ಯೇ
ದಿಶಾಂ ಚ ಪತಯೇ ನಮೋ ನಮೋ ವೃಕ್ಷೇಭ್ಯೋ
ಹರಿಕೇಶೇಭ್ಯಃ ಪಶೂನಾಂ ಪತಯೇ ನಮಃ,ʼ
ಎಂದುದಾಗಿ ಶಿವನೇ ಹೊನ್ನು ಕಾಣಿರೋ
ಶಿವಶಿವಾ ನಾನಾ ಪ್ರಯತ್ನದಿಂದ ಕುಲವುಳ್ಳವರು
ಅತ್ಯಂತ ಯೌವನೆಯಪ್ಪ ಹೆಣ್ಣಿಂಗೆ ಪ್ರಾಣಕ್ಕೆ ಪ್ರಾಣವಪ್ಪಂತೆ,
ಆ ಹೆಣ್ಣಿಂಗೆ ಅಂತಃಕರಣ ಚತುಷ್ಟಯಂಗಳು ಸ್ನೇಹಿಸುವಂತೆ
ಆ ಹೆಣ್ಣು ಪ್ರಾಣವಾಗಿಪ್ಪಂತೆ, ಆ ಲಿಂಗವೇ ಪ್ರಾಣವಾಗಿರಬೇಕು.
ಅದಕ್ಕೆ ಹೆಣ್ಣೇ ಶಿವನಾದ ಕಾರಣ
ಶಕ್ತ್ಯಾಧಾರೋ ಮಹಾದೇವಃ ಶಕ್ತಿರೂಪಾಯ ವೈ ನಮಃ
ಶಕ್ತಿಃ ಕರ್ಮ ಚ ಕರ್ತಾ ಚ ಮುಕ್ತಿಶಕ್ತೈ ನಮೋ ನಮಃ'
ಎಂದುದಾಗಿ-
ಆ ಹೆಣ್ಣು ತಾನೇ ಶಿವನು ಕಾಣಿರೋ.
ನಾನಾ ಪ್ರಯತ್ನದಿಂದ ಮಣ್ಣನಾರ್ಚಿಸುವಂತೆ,
ಆ ಭೂಮಿಯ ಅಗುಚಾಗಿಗೆ
ಅರ್ಥಪ್ರಾಣಾಭಿಮಾನವನಿಕ್ಕಿ ಆ ಭೂಮಿಯ ರಕ್ಷಿಸಿ
ಆ ಭೂಮಿಯ ಸರ್ವಭೋಗೋಪಭೋಗಂಗಳನು
ಭೋಗಿಸಿ ಸುಖಿಸುವಂತೆ, ಶಿವಲಿಂಗದಿಂದ ಭೋಗಿಸಬೇಕು.
ಅದೇಕೆಂದಡೆ- ಆ ಭೂಮಿಯೇ ಶಿವನಾದ ಕಾರಣ,
`ಓಂ ಯಜ್ಞಸ್ಯ ರುದ್ರಸ್ಯ ಚಿತ್ಪೃಥಿವ್ಯಾಭೂರ್ಭುವಃ ಸ್ವಃ
ಶಿವಂ ಶಿವೋ ಜನಯತಿ' ಎಂದುದಾಗಿ
ಭೂಮಿಯೇ ಶಿವನು ಕಾಣಿರೋ
ಸರ್ವಾಧಾರ ಮಹಾದೇವ. ಇದು ಕಾರಣ,
ಹೊನ್ನು ಹೆಣ್ಣು ಮಣ್ಣು ತ್ರಿವಿಧವು ಶಿವನು ಕಾಣಿರೋ.
ಈ ತ್ರಿವಿಧದ ಮರೆಯಲ್ಲಿ ಶಿವನಿಪ್ಪನು ಕಾಣಿರೋ.
ಇದು ಕಾರಣ, ಈ ತ್ರಿವಿಧಕ್ಕೆ ಮಾಡುವ ಸ್ನೇಹ,
ಇಂತೀ ತ್ರಿವಿಧದಲ್ಲಿ ಮಾಡುವ ಲೋಭ,
ಇಂತೀ ತ್ರಿವಿಧಕ್ಕೆ ಮಾಡುವ
ತಾತ್ಪರ್ಯವ ಶಿವಲಿಂಗಕ್ಕೆ ಮಾಡಿದಡೆ,
ಶಿವನಲ್ಲಿ ಸಾಯುಜ್ಯನಾಗಿ
ಸರ್ವಭೋಗೋಪಭೋಗವ ಭೋಗಿಸಿ
ಪರಮಪರಿಣಾಮ ಸುಖಸ್ವರೂಪನಾಗಿಪ್ಪನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.