ನಾನು ಕಾಮಿಸುತ್ತಿಪ್ಪ ವಸ್ತುವಿನಲ್ಲಿ
ಸಾಲೋಕ್ಯವಿದೆ, ಸಾಮೀಪ್ಯವಿದೆ,
ಸಾರೂಪ್ಯವಿದೆ, ಸಾಯುಜ್ಯವಿದೆ.
ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ,
ನಾನರಸುವ ಬಯಕೆ ಎಲ್ಲವೂ ಇದೆ.
ಎನ್ನ ಧ್ಯಾನ ಜಪತಪದಿಂದ
ಸಾಧ್ಯವಪ್ಪ ಸಿದ್ಧಿ
ಎಲ್ಲವೂ ಇದೆ ನೋಡಾ
ಶ್ರೀಗುರುವಿನ ಕಾರುಣ್ಯದಿಂದ
ಮಹಾವಸ್ತು ಕರಸ್ಥಲಕ್ಕೆ ಬಂದ ಬಳಿಕ
ಸರ್ವಸುಖಂಗಳೆಲ್ಲವೂ ಇವೆ, ಇವೆ ನೋಡಾ.
ಇನ್ನು ಎನ್ನ ಬಯಲ ಭ್ರಮೆಯೊಳಗೆ ಹೊಗಿಸದಿರಯ್ಯ
ನಿಮ್ಮ ಬೇಡಿಕೊಂಬೆನು, ನಿಮಗೆ ಎನ್ನಾಣೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.