Index   ವಚನ - 152    Search  
 
ನಿತ್ಯನಿರಂಜನಪರಂಜ್ಯೋತಿಲಿಂಗವು ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು ಮತ್ತೊಂದ ನೆನೆದು ಬದುಕಿಹೆನೆಂಬುದು ಅಜ್ಞಾನ ನೋಡಾ. ಸತ್ಯವು ಸರ್ವಾಂಗಲಿಂಗವೆಂಬುದನರಿಯದೆ ಮತ್ತೆ ಕಾಯವೆರಸಿ ಕೈಲಾಸಕ್ಕೆ ಹೋದೆಹೆನೆಂಬ ಬಯಕೆ ಕ್ರಮವಲ್ಲವಯ್ಯಾ. ಪಂಚಾಮೃತ ಮುಂದಿರಲು ಹಸಿದೆನೆಂದು ಲೋಗರ ಮನೆಯಲ್ಲಿ ಅನ್ನವ ಬೇಡಿ ಬಯಸುವರೆ? ಕಣ್ಣಮುಂದೆ ನಿಧಾನವಿರಲು ಬಳಸಲರಿಯದೆ ಬಡತನದಲ್ಲಿಹರೆ? ಲಿಂಗವಿಲ್ಲದವರು ಮೊದಲಾಗಿ ಲಿಂಗವ ನೆನೆದು ಬದುಕಿಹೆನೆಂಬರು. ಕಂಡು ಕಂಡು ನಂಬದಿಹುದುಚಿತವೆ? ಮುಂಗೈಯ ಕಂಕಣಕ್ಕೆ ಕನ್ನಡಿ ಬೇಡ. ಲಿಂಗವು ಅಂಗದೊಳಗಿರಲು ಲಿಂಗದ ಪರಿಯ ಅನ್ಯರ ಕೈಯಿಂದ ಕೇಳಬೇಡ. ಇದನರಿದು ಬೇರೆ ಮತ್ತೆ ಅರಸಲು ಬೇಡ ಕಾಣಿಸೆಂದು ಮನದಲ್ಲಿ ಮರುಗಬೇಡ ಮುಂದೆ ಜನ್ಮವುಂಟೆಂದು ಮನಸ್ಸಿನಲ್ಲಿ ನೋಯಬೇಡ. ಇದು ಕಾರಣ, ತನ್ನ ಕರಸ್ಥಲದಲ್ಲಿದ್ದ ವಸ್ತುವ ತಾನೆಂದರಿದಡೆ ತಾನೆ ಶಿವನು. ಇದು ಸತ್ಯ, ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.