Index   ವಚನ - 153    Search  
 
ನಿಮ್ಮ ಶರಣನು ಲಿಂಗಭರಿತನು, ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು; ಜ್ಞಾತೃ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು, ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು. ಈ ಪರಿ ನೋಡ ನೋಡಲು ಮತ್ತೆ ಚೋದ್ಯ ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು. ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು. ಸರ್ವಾಂಗಲಿಂಗವಾಗಿ ಸಲಹಿದನು. ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ? ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ, ಕೂಟದ ಪರಿ ನಿರ್ವಂಚಕತ್ವ, ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.