Index   ವಚನ - 156    Search  
 
ನಿಕ್ಷೇಪನಿಧಿಯ ಸಾಧ್ಯವ ಮಾಡಲೆಂದು ಅಂಜನಕ್ಕೆ ಭಸ್ಮವ ಮಾಡಿ, ಕೃಪಾಮೃತದಿಂ ಮರ್ದಿಸಿ ಅಂಜನವನಿಕ್ಕಿಕೊಂಡು ನಿಧಾನವ ತೆಗೆದುಕೊಂಡು ಸರ್ವಭೋಗವ ಮಾಡಬೇಕು. ಆ ಧನವನೆ ಭಸ್ಮವ ಮಾಡಿದ ಬಳಿಕ ಆ ಅಂಜನವ ಪ್ರಯೋಗಿಸುವ ಪರಿ ಎಂತಯ್ಯಾ? ಆ ನಿಧಾನವ ಗ್ರಹಿಸಿಕೊಂಡು ಇರ್ದ ಮಹಾಭೂತವು ನಾಥನನೇ ಬಲಿಯ ಬೇಡಿದಡೆ, ಆ ನಿಧಾನವ ತಂದು ಭೋಗಿಸುವವರಿನ್ನಾರಯ್ಯಾ? ಭಕ್ತಿಯನೂ ಪೂಜೆಯನೂ ಮಾಡಿಸಿಕೊಂಡು ಪ್ರಸಾದವ ಕರುಣಿಸಿ ಮುಕ್ತಿಯ ಕೊಡುವ ಶ್ರೀಗುರುಲಿಂಗಜಂಗಮವನೂ ಆಜ್ಞೆಯ ಮಾಡಿ ಆಯಸಂ ಬಡಿಸಿ, ಅವರನಪಹರಿಸಿ ದ್ರವ್ಯಮಂ ಕೊಂಡು ಅದಾರಿಗೆ ಭಕ್ತಿಯ ಮಾಡುವದು? ಅದಾರಿಗೆ ಪೂಜಿಸುವದು? ಅದಾರಿಗೆ ಅರ್ಪಿಸುವದು? ಹೇಳಿರೆ. ಪೂಜೆಗೊಂಬ ಲಿಂಗವ ಅಪೂಜ್ಯವಾಗಿ ಕಂಡಡೆ ಆ ಮಹಾಪಾಪಿಗೆ ಸದ್ಯವೇ ನರಕ, ಸಂದೇಹವಿಲ್ಲಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.