Index   ವಚನ - 155    Search  
 
ನಿರುಪಾಧಿಕನಾಗಿ, ನಿರ್ವಂಚಕತ್ವದಿಂದ ದಾಸೋಹವ ಮಾಡಿ, ಪರಿಣಾಮದಿಂದ ನಿತ್ಯದಾಸೋಹಿಯೆನಿಸಿದೊಡೆ, ಆ ದಾಸೋಹಿಯೆ ಸದ್ಭಕ್ತನು, ಆತನೆ ಮಾಹೇಶ್ವರ, ಆತನೇ ಪ್ರಸಾದಿ, ಆತನೇ ಪ್ರಾಣಲಿಂಗಿ, ಆತನೇ ಶರಣ, ಆತನೇ ಐಕ್ಯ. ಆತನೇ ಇಹಲೋಕ[ಪರಲೋಕ] ಪೂಜ್ಯನು, ಆತನೇ ಶ್ರೇಷ್ಠ, ಆತನೇ ವಿದ್ವಾನ್, ಆತನೇ ಸುಜ್ಞಾನಿ, ಇನಿತಲ್ಲದೆ ಶ್ರೀಗುರುಲಿಂಗಜಂಗಮ ಒಂದೆಯೆಂದು ಭಾವಿಸದರ್ಚಿಸದೆ ವಿಚಾರಿ[ಸದ] ದುರ್ಭಾವಿ ಉಪಾಧಿಕನು, ವಂಚಕನು, ದಾಸೋಹವ ಮಾಡಲರಿಯದಹಂಕಾರಿ, ಅಭಾಸನು, ಅಪೂಜ್ಯನು. ಭಕ್ತನಲ್ಲ, ಮಾಹೇಶ್ವರನಲ್ಲ. ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ; ಐಕ್ಯನಲ್ಲ; ಆತನೇ ಮೂರ್ಖನು, ಆತನೇ ಅಜ್ಞಾನಿ, ಆತನೇತಕ್ಕೆಯೂ ಬಾತೆಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.