Index   ವಚನ - 157    Search  
 
ನಿಃಕಾಮಿತ ಫಲವ ಕಾಮಿಸುವ ಮಹಾಕಾಮಿಯೆ ಶಿವಭಕ್ತನು, ಕ್ರೋಧಕ್ಕೆ ಕ್ರೋಧಿಸುವ ಮಹಾಕ್ರೋಧಿಯೆ ಲಿಂಗನಿಷ್ಠಾಪರನು, ನಿರ್ಲೋಭಕ್ಕೆ ಲೋಭಿಸುವ ಮಹಾಲೋಭಿಯೆ ಲಿಂಗಾವಧಾನಿ. ನಿರ್ಮೋಹಕ್ಕೆ ಮೋಹಿಸುವ ಮಹಾಮೋಹಿಯೆ ಲಿಂಗಾನುಭಾವಿ. ಅಷ್ಟಮದಂಗಳೊಡನೆ ಮದೋಹಂ ಎಂಬ ನಿರ್ಮದಗ್ರಾಹಿಯೆ ಲಿಂಗಾನಂದಸೌಖ್ಯನು. ಮತ್ಸರಕ್ಕೆ ಮತ್ಸರಿಸುವ ಮಹಾಮತ್ಸರಗ್ರಾಹಕನೆ ಲಿಂಗಸಮರಸಸಂಬಂಧವೇದ್ಯನು. ಇಂತೀ ಷಡ್ವರ್ಗಂಗಳಿಗೆ ವೈರಿಯಾಗಿರ್ಪ ಶಿವಭಕ್ತನೆ ಸದ್ಭಕ್ತನು. ಆ ಭಕ್ತದೇಹಿಕದೇವ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು.