Index   ವಚನ - 188    Search  
 
ಪ್ರಾಣಲಿಂಗಸಂಬಂಧಿಯಾದ ಸದ್ಭಕ್ತನು ಏಕಭಕ್ತೋಪವಾಸಂ ಮಾಡಲಾಗದು. ಅದೆಂತೆಂದಡೆ: ದೇವರಾರೋಗಣೆ ತಪ್ಪುವುದು, ಅಷ್ಟವಿಧಾರ್ಚನೆ ಷೋಡಶೋಪಚಾರ ಶ್ರೀ ತಪ್ಪುವುದು, ಶ್ರೀಗುರುವಾಜ್ಞೆ ತಪ್ಪುವುದು. ತನಗೆ ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ದೋಷಕಾರಿಯಪ್ಪನು ಕೇಳಿರಣ್ಣಾ. 'ಪ್ರಾಣಲಿಂಗಸಮಾಯುಕ್ತಾ ಏಕಭುಕ್ತೋಪವಾಸಿನಃ ಪ್ರಸಾದೋ ನಿಷ್ಫಲಶ್ಚೈವ ರೌರವಂ ನರಕಂ ಭವೇತ್' ಎಂದುದಾಗಿ, ಇದು ಕಾರಣ, ನಿತ್ಯನೈಮಿತ್ತಿಕ ಪಂಚಪರ್ವ ವಿಶೇಷತಿಥಿಗಳಲ್ಲಿ ಆವ ದಿನದಲ್ಲಿಯೂ ಒಂದೆಯೆಂದು ಅಷ್ಟವಿಧಾರ್ಚನೆ ಷೋಡಶೋಪಚಾರವೆ ಕರ್ತವ್ಯವೆಂದು ದೇವರಾರೋಗಣೆಯ ಮಾಡಿಸಿ, ಪ್ರಸನ್ನತ್ವವ ಪಡೆದು ಪ್ರಸಾದವ ಗ್ರಹಿಸಿ ಮುಕ್ತರಪ್ಪುದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.