Index   ವಚನ - 214    Search  
 
ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗರ್ಭೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾಧಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.