`ಮನೋವಾಕ್ಕಾಯಮೇಕಸ್ಯ ಗುರುಶ್ಚರಃ ಶಿವಸ್ತಥಾ'
ಶ್ರೀಗುರುಪೂಜೆಯ ಬೊಟ್ಟಿನಷ್ಟು ವಿಭೂತಿಯನಿಟ್ಟಡೆ
ಬೆಟ್ಟದಷ್ಟು ಪಾಪ ಹರಿವುದು.
ನೆಟ್ಟನೆಯರಿದು ಸರ್ವಾಂಗದಲ್ಲಿ ಭಸ್ಮವ ಧರಿಸಿದ ಶರಣಂಗೆ
ಮುಂದೆ ಹುಟ್ಟಲು ಹೊಂದಲು ಇಲ್ಲ ನೋಡಾ.
ಅಷ್ಟಾಷಷ್ಠಿತೀರ್ಥವಂ ಮಿಂದ ಫಲ
ಒಂದು ದಿನದ ಭಸ್ಮಸ್ನಾನಕ್ಕೆ ಸರಿಬಾರದು.
ಮುನ್ನ ಆದಿಯ ಋಷಿಜನಂಗಳು
ಭಸ್ಮಸ್ನಾನದಿಂದ ಕೃತಕೃತ್ಯರಾದರು.
ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ
ಭಸ್ಮಸ್ನಾನದಿಂದ ಕೃತಕೃತ್ಯರಾದರು ನೋಡಾ.