Index   ವಚನ - 223    Search  
 
`ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದೆನಿಸುವ ಲಿಂಗವು, `ಅತ್ಯತಿಷ್ಠದ್ದಶಾಂಗುಲಂ' ಎಂದೆನಿಸುವ ಲಿಂಗವು, `ಚಕಿತಮಭಿದತ್ತೇʼ ಎಂದೆನಿಸುವ ಲಿಂಗವು, `ಅಣೋರಣೀಯಾನ್ ಮಹತೋ ಮಹೀಯಾನ್' ಎಂದೆನಿಸುವ ಲಿಂಗವು, `ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃʼ ಎಂದೆನಿಸುವ ಲಿಂಗವು, `ಏಕಮೂರ್ತಿಸ್ತ್ರಿಧಾ ಭೇದಾಃ' ಎಂದೆನಿಸಿ ಶ್ರೀಗುರುಲಿಂಗಜಂಗಮರೂಪಾಗಿ, `ಇಷ್ಟಂ ಪ್ರಾಣಿಸ್ತಥಾ ಭಾವಸ್ತ್ರಿಧಾ ಚೈಕಂ ವರಾನನೇ' ಎಂದುದಾಗಿ ತ್ರಿವಿಧ ಏಕೀಭವಿಸಿ ಲಿಂಗರೂಪಾಗಿ, ಎನ್ನ ಕರಸ್ಥಲಕ್ಕೆ ಬಂದು ಕರತಳಾಮಳಕದಂತೆ ತೋರುವೆ. ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ, ಆಹಾ ಎನ್ನ ಪುಣ್ಯವೇ, ಆಹಾ ಎನ್ನ ಭಾಗ್ಯವೇ, ಶಿವ ಶಿವ ಮಹಾದೇವ! ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.