ರಾವಣ ಪಡೆದ ಲಿಂಗ ಚಂದ್ರಾಯುಧ ಪಾರ್ವತಿಯ ಗಜಮುಖ[ರ]
ಹರಿಯಜರು ಬಿಡಿಸಿದರೆಂದೆಂಬರು, ಸ್ವಾಮಿಭೃತ್ಯ ನ್ಯಾಯಕ್ಕದೇನು ಚೋದ್ಯ!
ಹರಿಯಜರು ಹರನ ಕೊಲ್ಲುವೆನೆಂದಸುರನ
ಹೆಣ್ಣು ರೂಪಾಗಿ, ಅವನ ಕೈಯಿಂದಲವನ ಸುಟ್ಟು,
ಇವರು ಮೊದಲಾದ ಶಿವದ್ರೋಹಿಗಳ ಹರಿಸಂಹರಿಸಿದರೇನು?
ದೈತ್ಯರಂ ಗೆಲುವ ಸಾಹಸಮಂ ಶಿವನು
ತನ್ನ ಭೃತ್ಯರ ಸಾಹಸಮಂ ಮೆರೆಸುವ ವಿನೋದವಲ್ಲದೆ
ಶಿವನ ಕೃಪೆಯಿಂದ ಪಡೆದು ಮಾಡುವ
ಸ್ವಾಮಿಭೃತ್ಯ ನ್ಯಾಯಕ್ಕದೇನು ಚೋದ್ಯ!
ಬಲೆಯೊಳಗೆ ಸಿಡಿಲುವಕ್ಕಿ ಬಿದ್ದರೆ
ಬೇಂಟೆಕಾರಗೆ ಸಾಧ್ಯವಾಗಲ್ಲುದೆ?
ಮರಣವಿರಹಿತ ಶಿವನ ಕೊಲಬಲ್ಲುವರುಂಟೆ?
ಸರ್ವಜ್ಞ ಶಿವನ ಸತಿಯ ಮತ್ತೊಬ್ಬರಾಳುವರುಂಟೆ?
ಸೂತ್ರಕನಾಡಿಸುವಂತೆ ಆಡುವ
ಬೊಂಬೆ ಆ ಸೂತ್ರಕನ ಕೊಲಬಲ್ಲವೆ?
ಆ ಸೂತ್ರಧಾರಕನ ಸತಿಯ ಬಂದು ಬೊಂಬೆಯಾಳಬಲ್ಲುದೆ?
ಮತ್ತೊಂದು ಬೊಂಬೆ ಬುದ್ಧಿಯಿಂದ ಸೆಳೆದುಕೊಳಬಲ್ಲುದೆ?
ಅದು ಕಾರಣ ಬ್ರಹ್ಮನಿಂದಲಾಯಿತು! ವಿಷ್ಣುವಿಂದಲಾಯಿತ್ತು!
ಮತ್ತೆ ಕೆಲವು ದೈವಗಳಿಂದವಾಯಿತ್ತೆಂಬ ಅಜ್ಞಾನಿಗಳ ಮಾತಂತಿರಲಿ,
ಬ್ರಹ್ಮವಿಷ್ಣುಗಳು ಸ್ವತಂತ್ರರಾದರೆ ಬ್ರಹ್ಮನ ತಲೆ ಹೋಗಲೇತಕ್ಕೆ?
ಸರಸ್ವತಿಯ ಮೂಗು ಹೋಗಲೇತಕ್ಕೆ?
ಬ್ರಹ್ಮನ ಮಗ ಸನತ್ಕುಮಾರ ಒಂಟೆಯಾಗಲೇತಕ್ಕೆ?
ಹರಿಯ ಮಗ ಕಾಮನುರಿದು ಹೋಗಲೇತಕ್ಕೆ?
ನಾರಸಿಂಹನು [ವ]ಧೆಗೆ ಒಳಗಾಗಲೇತಕ್ಕೆ?
ಕೃಷ್ಣನ ಹದಿನಾರು ಸಾವಿರ ಸ್ತ್ರೀಯರ
ಮೇಲೆ ಬೇಡರು ನೆರೆಯಲೇತಕ್ಕೆ?
ಕಾಳುಬೇಡನೆಚ್ಚಂಬು ತಾಗಿ ಕೃಷ್ಣ ಗೋಳುಗುಟ್ಟಿ ಸಾಯಲೇತಕ್ಕೆ?
ಅದು ಕಾರಣ, ನಮ್ಮ ಶಿವನು ಆಡಿಸಿದಂತೆಯಾಡಿ,
ಹುಟ್ಟೆಂದರೆ ಹುಟ್ಟಿ, ನಡೆಯಂದರೆ ನಡದು,
ನುಡಿಯೆಂದರೆ ನುಡಿದು ಸಾಯಂದರೆ ಸತ್ತು,
ಕೆಡಹಿದಂತೆ ಬಿದ್ದಿಹ ತೃಣದೊಂಬೆಗಳಿಗುಂಟೆ ಸ್ವತಂತ್ರ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.