Index   ವಚನ - 253    Search  
 
ಲಿಂಗವನರಿಯರು ಲಿಂಗದ ಮುಖವನರಿಯರು. ಪೂಜಿಸಲರಿಯರು ಅರ್ಚಿಸಲರಿಯರು ಅರ್ಪಿಸಲರಿಯರು. ನಾನೇ ಭಕ್ತನು ನಾನೇ ಮಾಹೇಶ್ವರನು ನಾನೇ ಪ್ರಸಾದಿಯೆಂಬರು. ಶಿವಾಚಾರಪರಾಙ್ಮುಖರು ನೋಡಾ. ಶಿವ ಶಿವಾ, ಪ್ರಾಣಲಿಂಗಿ ಐಕ್ಯನೆಂಬುದು ಮಹಾಕ್ರೀ. ಅದನೆಂತೂ ಅರಿಯರು. ಗುರು ಲಿಂಗ ಜಂಗಮ ಒಂದೆಂಬುದನೂ ವೇದ ಶಾಸ್ತ್ರ ಆಗಮ ಪುರಾಣ ಪುರಾತನರ ನಡೆ ನುಡಿಯಿಂದರಿದು ಕ್ರೀಯನರಿದು ಕಾಲವನರಿದು ಮನ ವಂಚನೆಯಿಲ್ಲದೆ ಶಿವಲಿಂಗವ ಪೂಜಿಸಬೇಕು, ಸದ್ಭಕ್ತಿಯಿಂ ಭಕ್ತನಾಗಿ. `ನ ಗುರೋರಧಿಕಂ ನ ಗುರೋರಧಿಕಂ' ಎಂಬುದನರಿದು ಪರಧನ ಪರಸ್ತ್ರೀ ಪರದೈವವ ತ್ಯಜಿಸಿ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮನೋವಾಕ್ಕಾಯಶುದ್ಧನಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರದಿಂ ಅರ್ಚಿಸಬೇಕು ಶ್ರೀಗುರುಲಿಂಗಕ್ಕೆ ಮಾಹೇಶ್ವರನಾಗಿ. ಜಂಗಮ ಪರಶಿವನೆಂದರಿದು ಭೋಗಮೂರ್ತಿ ಎಂದರಿದು ಮನೋವಾಕ್ಯಾಯಶುದ್ಧನಾಗಿ ಧನವಂಚನೆಯಿಲ್ಲದೆ ಸರ್ವಪದಾರ್ಥ ಸರ್ವಭೋಗಂಗಳನರ್ಪಿಸಿ ಜಂಗಮಲಿಂಗಾರ್ಚನೆಯಂ ಮಾಡಿ ಜಂಗಮಪ್ರಸಾದವಂ ಪಡೆದು ಪ್ರಸಾದವ ಭೋಗಿಸಿ ಪ್ರಸಾದಿಯಾಗಿ ಜಂಗಮಲಿಂಗಾರ್ಚನೆಯಂ ಮಾಡುವುದಯ್ಯಾ ಪ್ರಸಾದಿಯಾಗಿ. ಇಂತು ಭಕ್ತ ಮಾಹೇಶ್ವರ ಪ್ರಸಾದಿ ತನುವಿಡಿದು `ಏಕ ಮೂರ್ತಿಸ್ತ್ರಿಧಾ ಭೇದಾಃ' ಎಂಬುದನರಿದು ಕ್ರಿಯೆಯಲ್ಲಿ ಕ್ರಿಯೆಯನರಿದು ತನುವಿಡಿದು ಸಕಲನಾಗಿ ನಡೆವ ಸ್ಥಲ ಈ ಮೂರು ಪ್ರಾಣಲಿಂಗಿ ಶರಣನೈಕ್ಯನೆಂಬುದು ಇವು ಮೂರುಸ್ಥಲ. ಮನವಿಡಿದು ನಡೆವುದು ನಿಷ್ಕಲಸ್ಥಲವನೊಂದುಮಾಡಿ ಏಕೀಭವಿಸಿ ನಡೆವುದು. ಇವು ಮೂರುಸ್ಥಲಕ್ಕೆ ನಿಷ್ಕ್ರಿಯಾಸಂಬಂಧ. ಈ ಮಹಾವರ್ಮವನೂ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಶರಣರೇ ಬಲ್ಲರು, ವಾಙ್ಮನೋತೀತರು ಉಪಮಾತೀತರು, ಘನ ಮಹಾ[ಕ್ರೀಯ].