Index   ವಚನ - 280    Search  
 
ಶರಣನ ಇಂದ್ರಿಯ ಕರಣಂಗಳು ಶಿವಾಚಾರದಲ್ಲಿ ವರ್ತಿಸುವ ಪರಿಯೆಂತೆಂದಡೆ: ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣ ಇಂತಿವು ಪಂಚಜ್ಞಾನೇಂದ್ರಿಯಂಗಳು, ಇವಕ್ಕೆ ವಿವರ: ಶ್ರೋತ್ರದಲ್ಲಿ ಗುರುವಚನ, ಶಿವಾಗಮ, ಶಿವಪುರಾಣ, ಆದ್ಯರ ವಚನವಲ್ಲದೆ ಅನ್ಯವ ಕೇಳದಿಹ. ತ್ವಕ್ಕಿನಲ್ಲಿ ಶ್ರೀವಿಭೂತಿರುದ್ರಾಕ್ಷಿ ಶಿವಲಿಂಗವಲ್ಲದೆ ಅನ್ಯವ ಧರಿಸದಿಹ. ನೇತ್ರದಲ್ಲಿ ಶಿವಲಿಂಗವಲ್ಲದೆ ಅನ್ಯವ ನೋಡದಿಹ. ಜಿಹ್ವೆಯಲ್ಲಿ ಶಿವಮಂತ್ರವಲ್ಲದೆ ಅನ್ಯವ ಸ್ಮರಿಸದಿಹ. ಘ್ರಾಣದಲ್ಲಿ ಶಿವಪ್ರಸಾದವಲ್ಲದೆ ಅನ್ಯವ ವಾಸಿಸದಿಹ. ಇನ್ನು ಶಬ್ದ ಸ್ಪರ್ಶ ರೂಪು ರಸ ಗಂಧ ಇಂತಿವು ಪಂಚವಿಷಯಂಗಳು, ಇವಕ್ಕೆ ವಿವರ: ಶಬ್ದವೆ ಗುರು, ಸ್ಪರ್ಶವೆ ಲಿಂಗ, ರೂಪೆ ಶಿವಲಾಂಛನ, ರಸವೆ ಶಿವಪ್ರಸಾದ, ಗಂಧವೆ ಶಿವಾನುಭಾವ, ಇನ್ನು ವಾಕು, ಪಾಣಿ, ಪಾದ, ಪಾಯು, ಗುಹ್ಯ ಇಂತಿವು ಪಂಚಕರ್ಮೇಂದ್ರಿಯಂಗಳು. ಇವಕ್ಕೆ ವಿವರ: ಶಿವಯೆಂಬುದೆ ವಾಕು, ಶಿವಾಚಾರಸದ್ಭಕ್ತಿವಿಡಿವುದೆ ಪಾಣಿ, ಗುರುಮಾರ್ಗಾಚಾರದಲ್ಲಿ ಆಚರಿಸುವುದೆ ಪಾದ, ಅಧೋಗತಿಗಿಳಿವ ಮಾರ್ಗವ ಬಿಡುವುದೆ ಪಾಯು, ಶಿವಾನುಭಾವಿಗಳ ಸತ್ಸಂಗದಲ್ಲಿ ಆನಂದಿಸುವುದೆ ಗುಹ್ಯ. ಇನ್ನು ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರ ಇಂತಿವು ಪಂಚಕರಣಂಗಳು, ಇವಕ್ಕೆ ವಿವರ: ಶಿವಜ್ಞಾನವೆ ಜ್ಞಾನ, ಶಿವಧ್ಯಾನವೆ ಮನ, ಶಿವಶರಣರಲ್ಲಿ ವಂಚನೆಯಿಲ್ಲದಿಹುದೆ ಬುದ್ಧಿ, ಶಿವದಾಸೋಹವೆ ಚಿತ್ತ, ಶಿವೋಹಂ ಭಾವವೆ ಅಹಂಕಾರ. ಇನ್ನು ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ ಇಂತಿವು ಪಂಚಕೋಶಂಗಳು. ಇವಕ್ಕೆ ವಿವರ: ಅನ್ನಮಯವೆ ಪ್ರಸಾದ, ಪ್ರಾಣಮಯವೆ ಲಿಂಗ, ಮನೋಮಯವೆ ಶಿವಧ್ಯಾನ, ವಿಜ್ಞಾನಮಯವೆ ಶಿವಜ್ಞಾನ, ಆನಂದಮಯವೆ ಶಿವಾನಂದಮಯವಾಗಿರ್ಪುದು, ಇಂತಿ ಸರ್ವತತ್ವಂಗಳೆಲ್ಲವು ಲಿಂಗತತ್ವಂಗಳಾದ ಕಾರಣ ಶಿವಶರಣಂಗೆ ಶಿವಧ್ಯಾನವಲ್ಲದೆ ಮತ್ತೊಂದ ಧ್ಯಾನವಿಲ್ಲವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.