Index   ವಚನ - 286    Search  
 
ಶಿವ ತನ್ನ ವಿನೋದಕ್ಕೆ ರಚಿಸಿದನು, ಅನಂತ ವಿಶ್ವವನು. ರಚಿಸಿದವನು ವಿಶ್ವಕ್ಕೆ ಹೊರಗಾಗಿರ್ದನೆ? ಇಲ್ಲ. ವಿಶ್ವಮಯ ತಾನಾದನು, ವಿಶ್ವವೆಲ್ಲವೂ ತಾನಾದಡೆ ವಿಶ್ವದುತ್ಪತ್ತಿಸ್ಥಿತಿಲಯಕ್ಕೊಳಗಾದನೇ? ಇಲ್ಲ. ಅದೇನು ಕಾರಣವೆಂದಡೆ; ಅಜಾತನಾಗಿ ಉತ್ಪತ್ತಿ ಇಲ್ಲ, ಕರ್ಮರಹಿತನಾಗಿ ಸ್ಥಿತಿಗೊಳಗಲ್ಲ. ಮರಣರಹಿತನಾಗಿ ಲಯಕ್ಕೊಳಗಲ್ಲ, ಇಂತೀ ಗುಣತ್ರಯಂಗಳ ಹೊದ್ದಲರಿಯ. ತಾನಲ್ಲದೆ ವಿಶ್ವಕ್ಕಾಧಾರವಿಲ್ಲಾಗಿ ದೂರಸ್ಥನಲ್ಲ. ತನ್ನಲ್ಲಿ ತಾನಲ್ಲದ ಅನ್ಯವು ತೋರಲರಿಯದಾಗಿ, ಇದಿರಿಲ್ಲ. ಇದಿರಿಲ್ಲಾಗಿ ವಿಶ್ವಮಯ ತಾನಾದುದೇ ಸತ್ಯ. ಅರಸು ಕಾಲಾಳಾಗಬಲ್ಲ ತನ್ನ ವಿನೋದಕ್ಕೆ, ಮರಳಿ ಅರಸಾಗಬಲ್ಲ. ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು, ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲನಯ್ಯ.