Index   ವಚನ - 294    Search  
 
ಶಿವಭಕ್ತರ ಮಠವಲ್ಲದೆ ಒಲ್ಲೆನೆಂದು ಅರಸಿಕೊಂಡು ಹೋದಲ್ಲಿ, ಆ ಭಕ್ತರು ಕಾಣುತ್ತ ಆದರಣೆಯಿಂದ ಸಾಷ್ಟಾಂಗವೆರಗಿ ಶರಣೆಂದು ಪಾದಾರ್ಚನೆಯಂ ಮಾಡಿ, ವಿಭೂತಿಯಂ ಕೊಟ್ಟು, 'ನಿಮ್ಮ ಲಿಂಗದ ಆಳಿವನು ದೇವಾ' ಎಂದು ಬಿನ್ನೈಸಿದಲ್ಲಿ, ಭಕ್ತರ ನಡೆ ಭಕ್ತರ ನುಡಿಯ ವಿಚಾರಿಸಿದಡೆ ಪ್ರಥಮಪಾತಕ, ಭಾಂಡ ಭಾಜನದ ಶುದ್ಧಿಯನರಸಿದಡೆ ಎರಡನೆಯ ಪಾತಕ, ಜಲಶುದ್ಧಿಯನರಸಿದಡೆ ಮೂರನೆಯ ಪಾತಕ, ವಾಕ್‍ಶುದ್ಧಿಯನರಸಿದಡೆ ನಾಲ್ಕನೆಯ ಪಾತಕ, ಆ ಭಕ್ತರ ಹಸ್ತ ಮುಟ್ಟಲಾಗದೆಂದಡೆ ಐದನೆಯ ಪಾತಕ. ಇಂತೀ ಪಂಚಮಹಾಪಾತಕಕ್ಕೆ ಗುರಿಯಾದವರು ನಿಮ್ಮನೆತ್ತ ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?