Index   ವಚನ - 295    Search  
 
ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ವರ್ಮವನು ಶಿವಲಿಂಗದ ನಿಶ್ಚಯನು ಅದಾರಯ್ಯಾ ಬಲ್ಲವರು? ಅದಾರಯ್ಯಾ ಅರಿದವರು, ಶ್ರೀಗುರು ತೋರಿ ಕೊಡದನ್ನಕ್ಕರ. `ಸರ್ವೈಶ್ವರ್ಯಸಂಪನ್ನಂ ಮಧ್ಯಧ್ರುವ ತತ್ವಾಧಿಕಂ, ಎಂದುದಾಗಿ`ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ `ಯತೋ ವಾಚೋ ನಿವರ್ತಂತೇ' ಎಂದುದಾಗಿ, `ಅತ್ಯತಿಷ್ಠದ್ದಶಾಂಗುಲಮ್' ಎಂದುದಾಗಿ, ಈ ಪ್ರಕಾರದಲ್ಲಿ ವೇದಾಗಮಂಗಳು ಸಾರುತ್ತಿರಲು, ಲಿಂಗವನು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಯು ಅರಿಯಬಾರದು. `ಚಕಿತಮಭಿದತ್ತೇ ಶ್ರುತಿರಪಿ, ಎಂದುದಾಗಿ ವೇದ ಪುರುಷರಿಗೆಯು ಅರಿಯಬಾರದು. ಅರಿಯಬಾರದ ವಸ್ತುವ ರೂಪಿಸಲೆಂತೂ ಬಾರದು. ರೂಪಿಸಬಾರದ ವಸ್ತುವ ಪೂಜಿಸಲೆಂತುಬಹುದು? ಪೂಜೆಗಿಲ್ಲವಾಗಿ ಭಕ್ತಿಗಿಲ್ಲ, ಭಕ್ತಿಗಿಲ್ಲವಾಗಿ ಪ್ರಸಾದಕ್ಕಿಲ್ಲ, ಪ್ರಸಾದಕ್ಕಿಲ್ಲವಾಗಿ ಮುಕ್ತಿಗಿಲ್ಲ. ಮುಕ್ತಿಗಿಲ್ಲದೆ ದೇವದಾನವ ಮಾನವರೆಲ್ಲರು ಕೆಡುವರು ಕೆಡುವರು. ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು, ಮಹಾಗುರು, ಶ್ರೀಗುರು. `ನ ಗುರೋರಧಿಕಂ' ಎಂದುದಾಗಿ ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ಲಿಂಗ ಪ್ರತಿಷ್ಠೆಯಂ ಮಾಡಿದನು. ಅದೆಂತೆನಲು ಕೇಳಿರೆ: ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ' ಎಂದುದಾಗಿ, ಸದ್ಗರೋರ್ಲಿಂಗಭಾವಂ ಚ ಸರ್ವ ಬ್ರಹ್ಮಾಂಡವಾಸಿನಾಂ ಸರ್ವಲೋಕಸ್ಯ ವಾಸಸ್ಯ ಮುಕ್ತಿಕ್ಷೇತ್ರ ಸುವಾಸಿನಾಂ' ಎಂದುದಾಗಿ, ಸದ್ಗರೋರ್ದೀಯತೇ ಲಿಂಗಂ ಸದ್ಗುರೋರ್ದೀಯತೇ ಕ್ರಿಯಾ ಸದ್ಗುರೋರ್ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ ಎಂದುದಾಗಿ, ಸರ್ವಲೋಕಕ್ಕೆಯು ಸರ್ವರಿಗೆಯು ಲಿಂಗಪ್ರತಿಷ್ಠೆಯಂ ಮಾಡಿಕೊಟ್ಟನು. ಅರೂಪೇ ಭಾವನೋ ನಾಸ್ತಿ ಯದೃಷ್ಟಂ ತದ್ವಿನಶ್ಯತಿ ದೃಶ್ಯಾದೃಶ್ಯ ಸ್ವರೂಪತ್ವಂ ತಥಾಪ್ಯೇವಂ ಸದಾಭ್ಯಸೇತ್ ಎಂದುದಾಗಿ, ನಿಃಕಲ ಅರೂಪ ನಿರವಯ ಧ್ಯಾನಪೂಜೆಗನುವಲ್ಲ, ಸಕಲ ತತ್ವಸಾಮಾನ್ಯನೆಂದು ಸಕಲನಿಷ್ಕಲವನೊಂದಡಗಿ ಮಾಡಿದನು. ಲಿಂಗಂ ತಾಪತ್ರಯಹರಂ ಲಿಂಗಂ ದಾರಿದ್ರ್ಯನಾಶನಂ ಲಿಂಗಂ ಪಾಪವಿನಾಶಂ ಚ ಲಿಂಗಂ ಸರ್ವತ್ರ ಸಾಧನಂ' ಎಂದುದಾಗಿ, ಲಿಂಗವು ಪರಂಜ್ಯೋತಿ ಲಿಂಗವು ಪರಬ್ರಹ್ಮವೆಂದು ಲಿಂಗವನೆ ಪೂಜಿಸಿ, ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾಘನ ಗುರು ಲಿಂಗಪ್ರತಿಷ್ಠೆಯ ಮಾಡಿ ತೋರಿಕೊಟ್ಟನು. ಅದೆಂತೆಂದಡೆ_ ಬ್ರಹ್ಮಾವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ| ಸರ್ವೇ ಲಿಂಗಾರ್ಚನಾರತಾ ಜಾತಾಸ್ತೇ ಲಿಂಗಪೂಜಕಾಃ|| ಮತ್ತಂ_ ಗೌರೀಪತಿರುಮಾನಾಥೋ ಅಂಬಿಕಾ ಪಾರ್ವತೀಪತಿಃ| ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ|| ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ವಿಷ್ಣ್ವಾದಿ ದೇವದಾನವ ಮಾನವಾದಿಗಳು ಮಹಾಲಿಂಗವನೆ ಧ್ಯಾನಿಸಿ, ಪೂಜಿಸಿ, ಪರಮ ಸುಖಪರಿಣಾಮವ ಹಡೆದರೆಂದು ಮಾಡಿದನು, ಕೇವಲ ಸದ್ಭಕ್ತ ಜನಂಗಳಿಗೆ. ಅದೆಂತೆಂದಡೆ_ `ಇಷ್ಟಂ ಪ್ರಾಣಂ ತಥಾ ಭಾವಂ ತ್ರಿಧಾ ಏಕಂ ವರಾನನೇ' ಎಂದುದಾಗಿ, ಆ ಸದ್ಗುರು ಆ ಪರಶಿವನನು ತತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷ್ಠೆಯಂ ಮಾಡಿ, ಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು, ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. ಮತ್ತಂ `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ, ಗುರುಲಿಂಗ ಜಂಗಮಲಿಂಗ ಪರಶಿವಲಿಂಗ ಒಂದೆ. `ದೇಶಿಕಶ್ಚರಲಿಂಗಂ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ವರ್ಮವನು ಲಿಂಗದ ಸ್ವರೂಪವನು ಲಿಂಗದ ನಿಶ್ಚಯವನು ಆದಿಯಲ್ಲು ಧ್ಯಾನಪೂಜೆಯ ಮಾಡಿದವರನು, ಭಕ್ತಿಪ್ರಸಾದ ಮುಕ್ತಿಯ ಪಡೆದವರನು ವೇದ ಶಾಸ್ತ್ರ ಪುರಾಣಾಗಮಂಗಳು ಹೇಳುತ್ತಿವೆ. ಶಿವನ ವಾಕ್ಯಂಗಳಿಗಿದೆ ದಿಟ. ಮನವೆ ನಂಬು, ಕೆಡಬೇಡ ಕೆಡಬೇಡ, ಮಹಾಸದ್ಭಕ್ತರ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು. ಇದು ನಿಶ್ಚಯವ ಶಿವನು ಬಲ್ಲನಯ್ಯ. ಈ ಕ್ರಿಯೆಯಲ್ಲಿ ಲಿಂಗಜಂಗಮನರಿತು, ವಿಶ್ವಾಸಮಂ ಮಾಡಿ, ಕೇವಲ ಸದ್ಭಕ್ತಿ ಕ್ರೀಯನರಿದು, ವರ್ಮವನರಿದು, ಸದ್ಭಾವದಿಂದ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರರಾ.