Index   ವಚನ - 303    Search  
 
ಶಿವ ಶಿವಾ, ಬಸವಣ್ಣನೇ ಗುರುತ್ತ್ವವುಳ್ಳ ಮಹಾವಸ್ತುವಾಗಿ ಶ್ರೀ ಗುರುಲಿಂಗವೂ ಬಸವಣ್ಣನೇ. ಶಿವಸುಖಸಂಪನ್ನನಾಗಿ ಶಿವಲಿಂಗವೂ ಬಸವಣ್ಣನೇ. ಜಂಗಮಪ್ರಾಣಿಯಾಗಿ, ಜಂಗಮಲಿಂಗವೂ ಬಸವಣ್ಣನೇ. ಪ್ರಸಾದಗ್ರಾಹಕನಾಗಿ, ಪ್ರಸಾದಲಿಂಗವೂ ಬಸವಣ್ಣನೇ. ಭಾವಶುದ್ಧವುಳ್ಳ ಮಹಾನುಭಾವಿಯಾಗಿ, ಭಾವಲಿಂಗವೂ ಬಸವಣ್ಣನೇ. ಪಂಚಾಚಾರ ನಿಯತಾತ್ಮನಾಗಿ, ಆಚಾರಲಿಂಗವೂ ಬಸವಣ್ಣನೇ. ಗುರುಲಿಂಗಜಂಗಮಕ್ಕೆ, ಎನಗೆ ಇಷ್ಟವಾಗಿ, ಇಷ್ಟಲಿಂಗವೂ ಬಸವಣ್ಣನೇ. ಇಂತೀ ಚತುರ್ವಿದ ಪ್ರಾಣವಾಗಿ, ಪ್ರಾಣಲಿಂಗವೂ ಬಸವಣ್ಣನೇ. ಮಹಾಮಹಿಮನೂ ಬಸವಣ್ಣನೇ. ಮಹಾವಸ್ತುವ ಗರ್ಭೀಕರಿಸಿಕೊಂಡಿಪ್ಪಾತನೂ ಬಸವಣ್ಣನೇ. ಮಹಾಸತ್ಯನೂ ಬಸವಣ್ಣನೇ, ಮಹಾನಿತ್ಯನೂ ಬಸವಣ್ಣನೇ. ಮಹಾಶಾಂತನೂ ಬಸವಣ್ಣನೇ, ಮಹಾಸುಖಿಯೂ ಬಸವಣ್ಣನೇ. ಮಹಾಪರಿಣಾಮಿಯೂ ಬಸವಣ್ಣನೇ, ಮಹಾಲಿಂಗವೂ ಬಸವಣ್ಣನೇ. ಇಂತೀ ನವವಿಧಲಿಂಗವೂ ಬಸವಣ್ಣನೇ. ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದು ಎನಗೆ ಪ್ರಸಾದವನಿಕ್ಕಿ ಸಲಹಿದನಯ್ಯಾ ಬಸವಣ್ಣನು. ಇದು ಕಾರಣ, ಅನವರತ ನಾನು ಬಸವಾ, ಬಸವಾ, ಬಸವಯ್ಯಾ, ಬಸವ ಗುರುವೇ, ಬಸವಲಿಂಗವೇ, ಬಸವ ತಂದಯೇ ಬಸವಪ್ರಭುವೇ ನಮೋ ನಮೋ ಎನುತಿರ್ದೆನಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.