Index   ವಚನ - 304    Search  
 
ಶಿವ ಶಿವಾ, ಲಿಂಗವಂತರ ಚಿತ್ತಕ್ಕೆ, ಲಿಂಗದ ಚಿತ್ತಕ್ಕೆ ಬಹಹಾಂಗೆ ನುಡಿದು ನಡೆದು ಸದ್ಭಕ್ತಿಯ ಮಾಡಿ ಸದ್ಭಕ್ತರೆನಿಸಿಕೊಳ್ಳಿರೆ, ಮೂಕರಾಗಿಯಿರದೆ. ಹಿಡಿವುದ ಹಿಡಿಯದೆ, ಬಿಡುವುದ ಬಿಡದೆ ನಗೆಗೆಡೆಯಾದಿರಿ, ಅಭಕ್ತರಾದಿರಿ, ನರಕಕ್ಕೆ ಹೋದಿರಿ. ಹಿಡಿವುದಾವುದೆಂದಡೆ: ಗುರು ಲಿಂಗ ಜಂಗಮ ಒಂದೆಂದು ನಂಬಿ ಲಿಂಗವಿದ್ದುದೆಲ್ಲಾ ಲಿಂಗವೆಂದು ನಂಬಿ ತನು ಮನ ಧನ ವಂಚನೆಯಿಲ್ಲದೆ ಅರ್ಪಿಸಿ ಶ್ರೀಗುರುಲಿಂಗಜಂಗಮದ ಶ್ರೀಪಾದವನು ತನು ಮನ ಧನದಲ್ಲಿ ಹಿಡಿವುದು. ಪರಸ್ತ್ರೀ ಪರಧನ ಪರದೈವವನು, ಮನೋವಾಕ್ಕಾಯದಲ್ಲಿ ಅಣುರೇಣು ಮಾತ್ರ ಆಸೆದೋರದೆ ಬಿಡುವುದು. ಇವ ಬಿಟ್ಟು ನಡೆ[ದುದೆ] ನಡೆ, ಇವ ಬಿಟ್ಟೆನೆಂಬ ಸತ್ಯದ ನುಡಿಯೇ ನುಡಿ. ಇದೇ ಆಚಾರ, ಇದೇ ವ್ರತ, ಇದೇ ಶೀಲ ಇದೇ ಭಕ್ತಿಯ ಕುಳ, ಇದೇ ಶಿವಭಕ್ತಿಸ್ಥಳ ಇದೇ ಸತ್ಕ್ರಿಯಾ, ಈ ಸತ್ಕ್ರಿಯೆಯಲ್ಲಿ ನಡೆದಾತನೇ ಭಕ್ತನು. ಆತನೇ ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.