Index   ವಚನ - 310    Search  
 
ಶ್ರೀಗುರುಕಾರುಣ್ಯವ ಪಡೆದು ಲಿಂಗಸ್ವಾಯತವಾದ ಬಳಿಕ ಸರ್ವಾಂಗಲಿಂಗಮೂರ್ತಿ ಪರಶಿವನು. ಇನ್ನು ಮತ್ತೆ ಸಾಮಾನ್ಯಕ್ರೀಯ ವರ್ತಿಸುವ ಅಜ್ಞಾನಿಗಳನು ಏನೆಂದೆನ್ನಬಹುದಯ್ಯಾ? ಹೃದಯ ಭ್ರೂಮಧ್ಯ ಬ್ರಹ್ಮರಂಧ್ರದಲ್ಲಿ ಶಿವನಿಪ್ಪನು. ಇಡಾ ಪಿಂಗಲಾ ಸುಷುಮ್ನಾ ನಾಡಿಯಲ್ಲಿ ಪ್ರಾಣವಾಯುಗಳಡಸಿಕೊಂಡು ಹೋಗಿ ಕೂಡಿ ಒಂದಪ್ಪ ಆಯಸವ ನೋಡಾ. ಬಹಿರಂಗದಲ್ಲಿ ಮುಕ್ತಿಕ್ಷೇತ್ರಂಗಳ ಹೊಕ್ಕು ಲಿಂಗದರ್ಶನ ಸ್ಪರ್ಶನಯುಕ್ತರ ಆಯಸವ ನೋಡಾ. ಶಿವ ಶಿವ ಶ್ರೀಗುರು ಸಾಮಾನ್ಯವೇ? ಸಾಮಾನ್ಯವಾಗಿ ಕಾಣಲಹುದೆ? ಇಹಿಂಗೆ ಜ್ಞಾನ? ಈ ಪರಿಯ ಕೇಳುವುದೆ? ಅದೃಷ್ಟವ ದೃಷ್ಟಮಾಡಿ ಕೊಟ್ಟನು ಶ್ರೀಗುರು. ಅಪವಿತ್ರೋದಕ, ಗಂಗೆಯ ಕೂಡಿ ಗಂಗೆಯಾಯಿತ್ತು ನೋಡಿರಿ, ಕಾಷ್ಠ, ಅಗ್ನಿಯ ಕೂಡಿ ಅಗ್ನಿಯಾಯಿತ್ತು ನೋಡಿರಿ, ಸದ್ಭಕ್ತನು ಲಿಂಗವ ಕೂಡಿ ಲಿಂಗವಾದನು. 'ನಗರೀನಿರ್ಜರಾದ್ಯಂಬು ಗಂಗಾಂ ಪ್ರಾಪ್ಯ ಯಥಾ ತಥಾ ದೀಕ್ಷಾಯೋಗಾತ್ತಥಾ ಶಿಷ್ಯಃ ಶೂದ್ರೋ[s]ಪಿ ಶಿವತಾಂ ವ್ರಜೇತ್ ಭಕ್ತದೇಹೀ ಮಹಾದೇವೋ ತದ್ದೇಹೋ ಲಿಂಗಮೇವ ಚ ಅಂತರ್ಬಹಿಶ್ಚ ಲಿಂಗಂ ಚ ಸರ್ವಾಂಗಂ ಲಿಂಗಮೇವ ಚ' ಇಂತೆಂದುದಾಗಿ, ಇನ್ನು ಸಂದೇಹ ಬೇಡ. ಶ್ರೀಗುರುಕಾರುಣ್ಯದಿಂದ ಲಿಂಗವ ಧರಿಸಿ ಲಿಂಗಾರ್ಚನೆಯ ಮಾಡಿ ಸರ್ವಾಂಗಲಿಂಗವಾಗಿಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.