Index   ವಚನ - 309    Search  
 
ಶ್ರೀಗುರು ಕರುಣಿಸಿ ಪ್ರಾಣಲಿಂಗಸಂಬಂಧವ ಮಾ[ಡೆ], ಸದ್ಭಕ್ತನೆನಿಸಿದ ಬಳಿಕ ಇನ್ನೇನೆಂದುಪಮಿಸಬಹುದಯ್ಯಾ, ಈ ಮಹಾಪಥವನು? `ಅಕಾಯೋ ಭಕ್ತಕಾಯಸ್ತು ಮಮಕಾಯಸ್ತು ಭಕ್ತಿಮಾನ್ ' ಎಂದುದಾಗಿ ಲಿಂಗಕಾಯ. `ಲಿಂಗಾಂಗೀ ಮಹಜ್ಜೀವೋ ' ಎಂದುದಾಗಿ ಲಿಂಗಪ್ರಾಣಿ. ಇದು ಕಾರಣ, ಕಾಯ ಲಿಂಗ, ಪ್ರಾಣ ಲಿಂಗ ಅಂತರಂಗ ಬಹಿರಂಗ ಸರ್ವಾಂಗಲಿಂಗ, ಲಿಂಗವಂತನ ಕ್ರೀ ಎಲ್ಲವೂ ಲಿಂಗಕ್ರೀ. ಲಿಂಗ ಮಾಡಿತ್ತೇ ಅರ್ಪಿತ, ಲಿಂಗವಂತನ ಆರೋಗಣೆ ಲಿಂಗದಾರೋಗಣೆ. ಈ ಮಹಾಜ್ಞಾನದ ಪರಿಣಾಮವೇ ಪ್ರಸಾದ, ಇದ್ದುದೇ ದೇವಲೋಕ. ಈ ಮಹಾಕ್ರೀಯ ಲಿಂಗಾಯತದ ಲಿಂಗವಂತರೆ ಬಲ್ಲರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.