Index   ವಚನ - 311    Search  
 
ಶ್ರೀಗುರುಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ ಅದು ಲಿಂಗಾರ್ಚನೆಲ್ಲ. ಜಂಗಮಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಶಿವಲಿಂಗಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಅರ್ಪಿತವನರಿತು, ಅರ್ಪಿಸಿ ಪ್ರಸನ್ನತೆಯ ಹಡೆದು ಪ್ರಸಾದವ ಗ್ರಹಿಸದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಸರ್ವಾಚಾರಸಂಪತ್ತಿಲ್ಲದೆ ಲಿಂಗಾರ್ಚನೆ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ವಿಚಾರಜ್ಞಾನ ಸುಜ್ಞಾನ ಮಹಾಜ್ಞಾನವೆಂಬ ಪರಿಯನರಿಯದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಪ್ರಸಾದವ ಹಡೆದು ಮುಕ್ತನಲ್ಲ 'ಪೂಜಕಾ ಬಹವಸ್ಸಂತಿ ಭಕ್ತಾಶ್ಚ ಲಕ್ಷಮೇವ ಚ ಮತ್ಪ್ರಸಾದಧರಾ ದೇವಿ ದ್ವೌ ತ್ರಯೋ ದ[ಶ] ಪಂಗಕಃ' ಇಂತು ಪೂಜಕರಪ್ಪರು. ಬೆಟ್ಟವನೆಚ್ಚ ಕೋಲ್ತಪ್ಪದಂತೆ, ಪೂಜೆಯ ಫಲವುಂಟು. ಸಜ್ಜನಸದ್ಭಕ್ತಿಶಿವಾಚಾರ ಸಂಪತ್ತಿಗೆ ಸಲ್ಲದು. ಇದನರಿದು ಶ‍್ರೀಗುರುಲಿಂಗ ಶಿವಲಿಂಗದಲ್ಲಿ ಜಂಗಮಲಿಂಗದಲ್ಲಿ ಅತ್ಯಂತ ಪ್ರೇಮಿಯಾಗಿ, ಆವಾವ ವಸ್ತು ತನಗೆ ಪ್ರೇಮವಾದುದನಿತ್ತು ಪ್ರಸಾದಿಯಾಗಿ, ಶಿವಲಿಂಗಾರ್ಚನೆಯಂ ಮಾಡಿದಡೆ ಸರ್ವಲೋಕಕ್ಕೆ ಪೂಜ್ಯನಪ್ಪನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ..