Index   ವಚನ - 315    Search  
 
ಶ್ರೀಗುರು ಲಿಂಗ ಜಂಗಮ ಒಂದೆ ಎಂಬುದು, ಸದ್ಭಾವದಿಂ ಭಾವಿಸಿದುದಕ್ಕೆ ದೃಷ್ಟ. ಸದ್ಗುರುಕಾರುಣ್ಯವ ಪಡೆಹ, ಸದ್ಗುರುಕಾರುಣ್ಯವ ಪಡೆದುದಕ್ಕೆ ದೃಷ್ಟ. ಲಿಂಗವನರಿದು ಲಿಂಗಾರ್ಚನೆಯಂ ಮಾಡುಹ, ಲಿಂಗವನರಿದುದಕ್ಕೆ ದೃಷ್ಟ. ಜಂಗಮವನರಿಹ, ಜಂಗಮವನರಿದುದಕ್ಕೆ ದೃಷ್ಟ. ಸತ್ಯಪ್ರೇಮಿಯಾಗಿಹ, ಸತ್ಯಪ್ರೇಮಿಯಾದುದಕ್ಕೆ ದೃಷ್ಟ. ಪ್ರಸಾದವ ಪಡೆಹ, ಪ್ರಸಾದವ ಪಡೆದುದಕ್ಕೆ ದೃಷ್ಟ. ಪ್ರಸಾದವ ಧರಿಸಿ ಶಾಂತಿಯಾಗಿರುಹ, ಶಾಂತನಾದುದಕ್ಕೆ ದೃಷ್ಟ. ಪರಿಣಾಮವ ನೆಲೆಗೊಳುಹ, ಪರಿಣಾಮಿಯಾದುದಕ್ಕೆ ದೃಷ್ಟ. ಶ್ರೀಗುರುಲಿಂಗಜಂಗಮಕ್ಕೆ ತನುಮನಧನವನರ್ಪಿಸುಹ, ತನುಮನಧನವನರ್ಪಿಸಿದುದಕ್ಕೆ ದೃಷ್ಟ. ಅಹಂಕಾರ ಅಡಗುಹ, ಅಹಂಕಾರ ಅಡಗಿದುದಕ್ಕೆ ದೃಷ್ಟ. ತಾನೆಂಬುದಳಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ ತಾನೆ ದಿಟ, ಮಿಕ್ಕವೆಲ್ಲಾ ಸಟೆಯೆಂದರಿವುದು.