Index   ವಚನ - 316    Search  
 
ಶ್ರೀಗುರು ಲಿಂಗ ಜಂಗಮ ತ್ರಿವಿಧವೆಂದು ನಾನರಿವಂದು ಗುರುವೆ ಸ್ವಾನುಭಾವಲಿಂಗವಾದಂದು `ಸ್ವಾನುಭಾವಲಿಂಗಂ ಪ್ರಕೀರ್ತಿತಂ' ಎಂದುದಾಗಿ ಆ ಲಿಂಗ ಪ್ರಸಾದವಾದಂದು ಅರಿದೆನು, ಮಹಾವಸ್ತುವ. ಆ ವಸ್ತು ವಾಙ್ಮನಸಗೋಚರವಪ್ಪ ಒಂದು ಚರವಾಗಿ ದೀಕ್ಷೆಯೆಂದಡೂ ತಾನೆ, ಶಿಕ್ಷೆಯೆಂದಡೂ ತಾನೆ ಸ್ವಾನುಭಾವವೆಂದಡೂ ತಾನೆ, ಸಕಲ ನಿಷ್ಕಲವೆಂದಡೂ ತಾನೆ ಅಣು ಮಹತ್ತೆಂದಡೂ ತಾನೆ, ಮಹತ್ ಅಣುವೆಂದಡೂ ತಾನೆ ಧಿಕ್ಕರಿಸಿದ ಅಣುಗಳೊಳಗೆ ಸ್ವಾನುಭಾವಸಾಕ್ಷಿಕಮಪ್ಪ ಮಹತ್ತಿನೊಳಗೆ ಸಾಕ್ಷಿಕ ನೋಡಾ. ಇಂತಿವರೊಳಗೆ ಅವಿರಳವಾಗಿ, ತನ್ನ ಪರಿ ಬೇರಾದ ಘನವನೊಡಗೂಡಿದ, ಮಹ ಮಹತ್ತನೊಡಗೂಡಿದ, ಜ್ಯೋತಿ ಜ್ಯೋತಿಯನೊಡಗೂಡಿದ, ದೀಪ್ತಿ ದೀಪ್ತಿಯನೊಡಗೂಡಿದ ವಸ್ತುವೆ 'ಇದಂ ವಸ್ತು ಶಿವಸ್ಸಾಕ್ಷಾತ್ ಶಿವನಾಮ್ನಾ ವಿಧೀಯತೇ ಸರ್ವವಸ್ತುಮಯೋ ದೇವಃ ಸಕಲೋ ನಿಷ್ಕಲೋ ಭವೇತ್' ಎಂದುದಾಗಿ, `ಮನೋತೀತೋ ಮಹಾದೇವೋ ವಾಚಾತೀತಸ್ಸದಾಶಿವಃ' ಎಂದುದಾಗಿ, ಶಿವನು ಸರ್ವಗತನು. ಇಂತಪ್ಪ ವಸ್ತುವ ತಂದು ಶ್ರೀಗುರು [ಅಂಗ]ವೆಂಬ ಸುಕ್ಷೇತ್ರದಲ್ಲಿ ಲಿಂಗವೆಂಬ ಮಹವ ಬಿತ್ತಿ, ಶಿಷ್ಯನೆಂಬ ಅತಿರಸಮಹಾಜಲವನೆರೆದು ಫಲ ಫಲಿತವಾದಡೆ ಇದೇ ಗುರು. ಗುರುವಿಂಗೊಂದನರ್ಪಿಸುವೆ, ಲಿಂಗಕ್ಕೊಂದ ಬೇರು ಸಹಿತ ಕೊಡುವೆ. ಆ ಫಲವ ಜಂಗಮಕ್ಕಿತ್ತಲ್ಲಿ ಪದವಿಲ್ಲ ಪದಾರ್ಥವಿಲ್ಲ. ಚತುರ್ವಿಧದ ಹಂಗುಹರಿದು, ಮತ್ತೆಂದಿಗೂ ಪದ ಫಲಾದಿಗಳಿಗೆ ಬಯಸದಿ[ಪ್ಪೆ]. ಅದು ಹೇಗೆಂದಡೆ: 'ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ಯಥಾ ಜ್ಞಾನಾಗ್ನಿದಹನಂ ನಾಸ್ತಿ ನ ಚ ತತ್ರ ಕ್ರಿಯಾಧಿಕಾ' ಎಂದುದಾಗಿ, ಇಂತಪ್ಪ ಮಹಾವಸ್ತುಗಳಿಗೆ ಮುಂದೊಂದರಿದಪ್ಪ ಅಧಿಕವಿಲ್ಲ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.