ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ
ಲಿಂಗವನು ಭಕ್ತಿಯಿಂದ ಪೂಜಿಸಿ ಲಿಂಗದಲ್ಲಿ ವರವ ಪಡೆದು,
ಶಿವಪದವ ಪಡೆದರು ಪುರಾತನರು. ಅದೆಂತೆನಲು ಕೇಳಿರೆ:
ಬಳ್ಳ ಲಿಂಗವೆ? ಅಲ್ಲ, ಅದು ಸಟೆ,
ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ.
ಆಡಿನ ಹಿಕ್ಕೆ ಲಿಂಗವೆ? ಅಲ್ಲ, ಅದು ಸಟೆ.
ಸದ್ಭಾವದಿಂ ಲಿಂಗವಾಯಿತ್ತು, ಗೊಲ್ಲಾಳರಾಯನಿಂದ.
ನರಮಾಂಸವ ಭಕ್ಷಿಸುವೆನೆಂಬವ ಜಂಗಮವೆ? ಅಲ್ಲ, ಅದು ಸಟೆ.
ಸದ್ಭಾವದಿಂ ಭಾವಿಸೆ ಜಂಗಮವಾಗಿ ಕೇವಲ ಲಿಂಗವಾಯಿತ್ತು
ಸಿರಿಯಾಳನಿಂದ.
ಸತ್ತ ಕರುವ ಹೊತ್ತು ಮಾದಾರನಾಗಿಬರುವುದು ಜಂಗಮಲಕ್ಷಣವೇ?
ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮ ಲಿಂಗವಾಯಿತ್ತು
ಕೆಂಭಾವಿಯ ಭೋಗಣ್ಣನಿಂದ.
ಡೊಂಬಿತಿ ಗುರುವೆ? ಅಲ್ಲ, ಅದೂ ಸಟೆ.
ಸದ್ಭಾವದಿಂ ಭಾವಿಸೆ ಲಿಂಗವಾಯಿತ್ತು ಗುರುಭಕ್ತಯ್ಯಂಗಳಿಂದ.
ಇಂತು ಸಟೆಯ ದಿಟವ ಮಾಡಿ
ದಿಟವಾದರು, ಸದ್ಭಕ್ತರಾದರು, ಕೇವಲ ಲಿಂಗವ ಮಾಡಿದರು.
ದಿಟ ಶಿವನ ಸಟೆಯ ಮಾಡಿ ಕಂಡು ಸನತ್ಕುಮಾರನೊಂಟೆಯಾದನು.
ದಿಟ ಶಿವನ ಸಟೆಯ ಮಾಡಿ ಕಂಡು
ಬ್ರಹ್ಮ ತನ್ನ ಶಿರವ ಹೋಗಾಡಿಕೊಂಡನು.
ದಿಟ ಶಿವನ ಸಟೆಯ ಮಾಡಿ ಕಂಡು ದಕ್ಷನು
ತನ್ನ ಶಿರವ ಹೋಗಾಡಿಕೊಂಡನು.
ದಿಟ ಶಿವನ ಸಟೆಯ ಮಾಡಿ ಕಂಡು ನರಸಿಂಹನು ವಧೆಗೊಳಗಾದನು.
ಈ ಮಹಾ ತಪ್ಪುಗಳನ್ನು ಮಾಡಿ ದೋಷಿಗಳಾದರು.
ಮಹಾಲಿಂಗದ ಸದ್ಭಕ್ತರು,
ಮಹಾಶರಣಪ್ಪ ನಂದೀಶ್ವರ ವೀರಭದ್ರ ಮೊದಲಾದ
ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ
ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು.
ಸಟೆಯ ದಿಟವ ಮಾಡುವ ಶಕ್ತಿಯಿಲ್ಲ ಎಮ್ಮ ಸದ್ಭಕ್ತರಂತೆ.
ಅದಂತಿರಲಿ, ದಿಟವ ಸಟೆಯ ಮಾಡಿ
ದೋಷಿಗಳಾದಿರಿ ಅಭಕ್ತರಂತೆ. ಅದಂತಿರಲಿ,
ಸಟೆಯ ದಿಟವ ಮಾಡಬೇಡ, ದಿಟವ ಸಟೆಯ ಮಾಡಬೇಡ.
ಸಹಜಸ್ವಭಾವ ನಿತ್ಯಸತ್ಯವಹ ತಾತ್ಪರ್ಯವನೆ
ವಿಶ್ವಾಸವ ಮಾಡಿ, ನಂಬಿ ಭಕ್ತಿಯಿಂ ಪೂಜಿಸಿ
ಅವಿಶ್ವಾಸದಿಂ ಕೆಡಬೇಡ, ಕೆಡಬೇಡ.
ಸಹಜವಹ ದೃಷ್ಟವಹ ಪರಶಿವನು
ಶ್ರೀಗುರು ವಿಶ್ವಾಸವಂ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಆ ಪರಶಿವನು ಶ್ರೀಗುರುಲಿಂಗವು ಏಕವಾದ ಲಿಂಗವು
ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಆ ಪರಶಿವಮೂರ್ತಿ ಜಂಗಮವು
ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ.
ಕೇವಲವಿಶ್ವಾಸವ ಮಾಡಿ ಪ್ರಸಾದವ ಪಡೆದು ಮುಕ್ತರಾಗಿ, ಇದು ದೃಷ್ಟ.
ಅವಿಶ್ವಾಸದಿ ಕೆಡದಿರಿ ಕೆಡದಿರಿ. ಸರ್ವಸದ್ಭಾವವಿಶ್ವಾಸದಿಂ ಬದುಕಿರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವ ನಂಬಿರಣ್ಣಾ.