Index   ವಚನ - 333    Search  
 
ಸದ್ಗುರುವಿನಿಂದ ಮಹತ್ತಪ್ಪ ಮಹಾಲಿಂಗ ಉತ್ಪತ್ತಿ, 'ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ' ಎಂದುನಾಗಿ, ಸದ್ಗುರುವಿನಿಂದ ಉರಿಲಿಂಗ ಉತ್ಪತ್ತಿ, ಲಿಂಗದಿಂದವು ಜಂಗಮ ಉತ್ಪತ್ತಿ, ಜಂಗಮದಿಂದವು ಪ್ರಸಾದೋತ್ಪತ್ತಿ, ಪ್ರಸಾದದಿಂದವು ಭಕ್ತಿ ಉತ್ಪತ್ತಿ, ಭಕ್ತಿ ಪ್ರಸಾದದಿಂದವೂ ಸಕಲೋತ್ಪತ್ತಿ. ಇದು ಕಾರಣ, ಪ್ರಸಾದವುಳ್ಳವಂಗೆ ಭಕ್ತಿ ಉಂಟು, ಯುಕ್ತಿಯುಳ್ಳವಂಗೆ ಜಂಗಮ ಉಂಟು, ಜಂಗಮವುಳ್ಳವಂಗೆ ಲಿಂಗ ಉಂಟು. ಲಿಂಗವುಳ್ಳವಂಗೆ ಸದ್ಗುರು ಉಂಟು. ಇದು ಕಾರಣ, ಸದ್ಗುರುವೇ ಕಾರಣವು 'ಗುರುಣಾ ದೀಯತೇ ಲಿಂಗಂ ಗುರುಣಾ ದೀಯತೇ ಕ್ರಿಯಾ ಗುರುಣಾ ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ' ಎಂದುದಾಗಿ, ಸದ್ಗುರುವೆ ಸರ್ವಶ್ರೇಷ್ಠನು, ಸದ್ಗುರುವೆ ಸರ್ವಪೂಜ್ಯನು, ಸದ್ಗುರುವೆ ಸರ್ವಕಾರಣವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.