Index   ವಚನ - 338    Search  
 
ಸಪ್ತವ್ಯಸನಿಗಳಾದವರಿಗೆ ಆ ವ್ಯಸನಿಗಳ ಸಂಗದಿಂದಲ್ಲದೆ ಆ ವ್ಯಸನಂಗಳು ಸಿದ್ಧಿಸವಯ್ಯಾ. ಲಿಂಗವ್ಯಸನಿಗಳಿಗೆ ಆ ಲಿಂಗವ್ಯಸನಿಗಳ ಸಂಗದಿಂದಲ್ಲದೆ ಆ ಲಿಂಗವ್ಯಸನಂಗಳು ಸಿದ್ಧಿಸವಯ್ಯಾ, ಆ ಲಿಂಗವ್ಯಸನದಿಂದಲ್ಲದೆ ಜಂಗಮವ್ಯಸನ ಸಿದ್ಧಿಸದಯ್ಯಾ. ಆ ಜಂಗಮವ್ಯಸನದಿಂದಲ್ಲದೆ ಪ್ರಸಾದವ್ಯಸನ ಸಿದ್ಧಿಸದಯ್ಯಾ, ಆ ಪ್ರಸಾದವ್ಯಸನದಿಂದಲ್ಲದೆ ಮುಕ್ತಿಯಿಲ್ಲವಯ್ಯಾ. ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ಲಿಂಗಾನುಭಾವಿಗಳ ಸಂಗವನೆ ಕರುಣಿಸಿ, ಎನ್ನ ಮುಕ್ತನ ಮಾಡಯ್ಯಾ ನಿಮ್ಮ ಧರ್ಮ.