Index   ವಚನ - 351    Search  
 
ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ ಋಕ್‍ಯಜುಸ್ಸಾಮಾಥರ್ವಣದಲ್ಲಿ ಅಂತರ್ಗತವಾಗಿಹ ಶ್ರೀರುದ್ರ, ಪಂಚಬ್ರಹ್ಮ, ಶ್ವೇತಾಶ್ವತರ, ಬ್ರಹದಾರಣ್ಯಕ, ಕೇನ, ಈಶ, ಜಾಬಾಲ, ಗರ್ಭ, ಕಾಲಾಗ್ನಿರುದ್ರ, ವಾಜಸನೇಯ, ಶಿವಸಂಕಲ್ಪ, ಬ್ರಹ್ಮಬಿಂದು, ಕಾತ್ಯಾಯನ, ಕಣ್ವ ಇತ್ಯಾದಿ ನಿಖಿಲೋಪನಿಷತ್ತುಗಳನ್ನು ಪ್ರತಿಪಾದಿಸಿ ನೋಡಲು, ನಿತ್ಯಶುದ್ಧ ನಿರ್ಮಲಪರಶಿವನನ್ನು ಸತ್ಯಶುದ್ಧ ಶಿವಾಚಾರಸಂಪನ್ನಭಕ್ತರನಲ್ಲದೆ ವಿಸ್ತರಿಸಿ ಸ್ತುತಿಗೈದುದಿಲ್ಲ. ಅದಕ್ಕೆ ಶಪಥ, ಆ ವೇದಪುರಷರ ಚಿತ್ತವೇ ಸಾಕ್ಷಿ. ಶಿವನ ಶರಣರು ವಾಙ್ಮಾನಸಾಗೋಚರರು ಎಂದು ಹೇಳುತ್ತಲಿದೆ ಶ್ರುತಿ. ಅಖಿಲಬ್ರಹ್ಮಾಂಡಂಗಳಿಗೆ ಪಿತಮಾತೆಯಹ ಶಿವನಲ್ಲಿ ಶಿವನ ಶರಣನು ಅವಿರಳನೆಂಬುದಕ್ಕೆ `ಯಥಾ ಶಿವಸ್ತಥಾ ಭಕ್ತಃ' ಎಂಬ ವೇದವಾಕ್ಯವೇ ಪ್ರಮಾಣ. `ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃಸಮವರ್ತತ' ಎಂಬ ಶ್ರುತಿ, ಸಕಲ ಬ್ರಹ್ಮಾಂಡಕೋಟಿಗಳು ಶಿವನ ನಾಭಿಕೂಪದಲ್ಲಿ ಅಡಗಿಹವೆಂದು ಹೇಳಿತ್ತು. `ಭಕ್ತಸ್ಯ ಹೃತ್ಕಮಲಕರ್ಣಿಕಾಮಧ್ಯಸ್ಥಿತೋ[s]ಹಂ ನ ಸಂಶಯಃʼ ಎಂಬ ಶ್ರುತಿ, ಅಂತಹ ಶಿವನು ಸದ್ಭಕ್ತನೊಳಗಡಗಿಹನೆಂದು ಹೇಳಿತ್ತು. `ಅಘೋರೇಭ್ಯೋ[s]ಥ ಘೋರೇಭ್ಯೋ ಘೋರಘೋರತರೇಭ್ಯಃ ಸರ್ವೇಭ್ಯಃ ಸರ್ವಶರ್ವೆರಭ್ಯೋ ನಮಸ್ತೆ ಅಸ್ತು ರುದ್ರರೂಪೇಭ್ಯಃʼ ಎಂಬ ಶ್ರುತಿ, ಶಿವನ ಅಘೋರಮೂರ್ತಿಯ ನಿತ್ಯತೇಜೋಮೂರ್ತಿಯೆಂದು ಹೇಳಿತ್ತು. 'ಜ್ಯೋತಿರ್ಲಿಂಗತ್ವಮೇವಾರ್ಯೇ ಲಿಂಗೀ ಚಾಹಂ ಮಹೇಶ್ವರಿ ತದೇತದವಿಮುಕ್ತಾಖ್ಯಂ ಜ್ಯೋತಿರಾಲೋಕ್ಯತಾಂ ಪ್ರಿಯೇ' ಎಂಬ ವಾಕ್ಯ, ಶರಣಸತಿ ಲಿಂಗಪತಿಯಹ ಶಿವನ ಶರಣನೇ ಜ್ಯೋತಿರ್ಲಿಂಗವೆಂದು ಹೇಳಿತ್ತು. ʼತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ʼ ಎಂಬ ಶ್ರುತಿ, ಶಿವಧ್ಯಾನ ಸ್ತುತಿ ನಿರೀಕ್ಷಣೆ ಪೂಜೆಯಿಂದಲ್ಲದೆ ಜನ್ಮ ಮೃತ್ಯು ಜರಾ ವ್ಯಾಧಿ ಹಿಂಗಿ ಪರಮಸುಖ ಪರಮನಿರ್ವಾಣವಾಗದೆಂದು ಹೇಳಿತ್ತು. `ಅಪವರ್ಗಪದಂ ಯಾತಿ ಶಿವಭಕ್ತೋ ನ ಚಾಪರಃ' ಎಂಬ ವಾಕ್ಯ, ಮುಕ್ತಿ ಶಿವಭಕ್ತಂಗಲ್ಲದೆ ಮತ್ತೊಬ್ಬರಿಗಿಲ್ಲವೆಂದು ಹೇಳಿತ್ತು. `ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಂ| ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ತೇ ನಮಃ||' ಎಂಬ ಶ್ರುತಿ, ಪರಬ್ರಹ್ಮವೆಂಬುದು ಶಿವನಲ್ಲದೆ ಬೇರೆ ಬೇರೆ ಮತ್ತೊಂದು ವಸ್ತುವಿಲ್ಲವೆಂದು ಹೇಳಿತ್ತು. `ಬ್ರಹ್ಮಣಿ ಚರತಿ ಬ್ರಾಹ್ಮಣಃ' ಎಂಬ ವಾಕ್ಯ, ಅಂತಹ ಬ್ರಹ್ಮವ ಚಿಂತಿಸಿ ನಿರೀಕ್ಷಿಸಿ ಸ್ತುತಿಸಿ ಪೂಜಿಸಿ ಪ್ರಸನ್ನಪ್ರಸಾದವ ಪಡೆವ ಸದ್ಭಕ್ತನೇ ಮಹಾಬ್ರಾಹ್ಮಣನೆಂದು ಹೇಳಿತ್ತು. `ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತಃ ಪಾತ್ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂಬ ಶ್ರುತಿ, ಸಕಲ ಜೀವರ ಶಿವನೆಂದು ಹೇಳಿತ್ತು. `ಭಕ್ತಸ್ಯ ಚೇತನೋ ಹ್ಯಹಂ' ಎಂಬ ವಾಕ್ಯ, ಶಿವಭಕ್ತಂಗೆ ನಾನೇ ಚೈತನ್ಯನೆಂದು ಹೇಳಿತ್ತು. ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಶಿವಭಕ್ತನ ಶ್ರೀಮೂರ್ತಿಗಿನ್ನು ಸರಿಯುಂಟೆ? `ವಾಚೋತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ' ಇಂತಪ್ಪ ಶಿವನಲ್ಲಿ ಅವಿನಾಭಾವರಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿದಡೆ ಕಣ್ಗೆ ಮಂಗಳತರ ನಿರುಪಮಸುಖ, ನುಡಿಸಿದಡೆ ಶಿವರಾತ್ರಿ, ಸಂಭಾಷಣೆ ಮಾಡಿದಡೆ ಜನ್ಮಕರ್ಮಬಂಧನನಿವೃತ್ತಿ, ಜೀವನ್ಮುಕ್ತನಹ, ಇದು ನಿತ್ಯ ಕೇಳಿರಣ್ಣಾ. ದರ್ಶನಾತ್ ಶಿವಭಕ್ತನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ ಎಂದು ನಾರದಬೋಧೆಯಲ್ಲಿ ಈಶ್ವರ ಹೇಳಿದನು. ಇಂತಪ್ಪ ಈಶ್ವರನ ಕಾಣವು ವೇದಂಗಳು. `ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್' ಎಂದುದಾಗಿ, ಇಂತು ವೇದಕ್ಕತೀತನಂತಹ ಶಿವನ ಶರಣರ ಮಾಹಾತ್ಮೆಯ ಹೊಗಳಲ್ಕೆ ವೇದಕ್ಕೆ ವಶವಲ್ಲ, ಮಂದಮತಿಮಾನವರ ಮಾತಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎಂಬೆ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.