Index   ವಚನ - 357    Search  
 
ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು, ಬ್ರಹ್ಮಚಾರಿಗಳಾಗಬೇಕೆಂದು ಬಣ್ಣುವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ. ಹೆಣ್ಣು ಬಿಟ್ಟಡೆಯೂ ಹೊನ್ನ ಬಿಡರಿ, ಹೊನ್ನ ಬಿಟ್ಟಡೆಯೂ ಮಣ್ಣ ಬಿಡರಿ. ಒಂದ ಬಿಟ್ಟಡೆಯೂ ಒಂದ ಬಿಡರಿ. ಬ್ರಹ್ಮಚಾರಿಗಳೆಂತಪ್ಪಿರಿ ಹೇಳಿರಣ್ಣಾ? ಹೆಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು, ಅವರೆಂತು ಹೇಳಿದರು? ನೀವೆಂತು ಕೇಳಿದಿರಿ? ಹೆಣ್ಣನು ಹೆಣ್ಣೆಂದರಿವಿರಿ, ಹೊನ್ನನು ಹೊನ್ನೆಂದರಿವಿರಿ. ಮಣ್ಣನು ಮಣ್ಣೆಂದರಿವಿರಿ, ಬ್ರಹ್ಮಚಾರಿಗಳೆಂತಪ್ಪಿರಣ್ಣಾ? ಬಿಟ್ಟಡೆ, ಹೆಣ್ಣು ಹೊನ್ನು ಮಣ್ಣು ಈ ಮೂರನು ಬಿಟ್ಟು ಜ್ಞಾನದಲ್ಲಿ ಸುಳಿಯಲ್ಲಡೆ, ಭವಂ ನಾಸ್ತಿ ತಪ್ಪದು. ಹಿಡಿದಡೆ ಹೆಣ್ಣು ಮಣ್ಣು ಹೊನ್ನು ಈ ಮೂರನು ಹಿಡಿದು, ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ, ಭವಂ ನಾಸ್ತಿ ತಪ್ಪದು. ಅದೆಂತೆಂದಡೆ:ವೀರಾಗಮೇ 'ಮಾತರಃ ಪಿತರಶ್ಚೈವ ಸ್ವಪತ್ನೀ ಬಾಲಕಾಸ್ತಥಾ ಹೇಮ ಭೂಮಿರ್ನಬಂಧಾಕಾಃ ಪ್ರಾಜ್ಞಾನಂ ಬ್ರಹ್ಮಚಾರಿಣಾಂ' ಎಂದುದಾಗಿ, ಹೆಣ್ಣು, ಹೊನ್ನು, ಮಣ್ಣು ಈ ಮೂರನು ಹಿಡಿದು ಸದ್ಭಕ್ತಿಯಿಂ ದಾಸೋಹವ ಮಾಡಬಲ್ಲಡೆ ಭವಂ ನಾಸ್ತಿ. ಅಲ್ಲಿ ಇದ್ದಡೆಯೂ ನೀರ ತಾವರೆಯಂತಿಪ್ಪರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರು.