Index   ವಚನ - 356    Search  
 
ಹೆಣ್ಣ ಧ್ಯಾನಿಸಿ ನಿಮ್ಮ ಮರೆದೆನಯ್ಯಾ, ನಾನು ಮರೆದ ಕಾರಣ ನೀನೆನ್ನ ಮರೆದೆ. ನೀ ಮರೆದ ಕಾರಣ ಹೆಣ್ಣು ಸಾಧ್ಯವಾಗದು. ನಿನ್ನ ಮೋಹ ತಪ್ಪಿ ಕೆಟ್ಟೆನಯ್ಯಾ. ಹೊನ್ನು ಹೆಣ್ಣು ಮಣ್ಣು ಎಂಬ ಆಸೆಯೆನ್ನ ಘಾಸಿ ಮಾ[ಡೆ], ಕೆಟ್ಟೆ ಕೆಟ್ಟೆ ಶಿವಧೋ ಶಿವಧೋ ಮಹಾದೇವ. ಹೊನ್ನು ಹೆಣ್ಣು ಮಣ್ಣಿಗೆ ಕರ್ತನು ನೀನು. `ತೇನ ವಿನಾ ತೃಣಾಗ್ರಮಪಿ ನ ಚಲತಿ' ಎಂಬುದನರಿದೂ, ಮದದಲ್ಲಿದ್ದು ಕೆಟ್ಟೆ. ಈ ಕೇಡಲ್ಲದೆ ಹಸಿವು ತೃಷೆ ವ್ಯಸನ ವಿಷಯ ಪಂಚೇಂದ್ರಿಯ ಷಡುವರ್ಗ ನೀನಾಗಿ ಕಾಡುತ್ತಿವೆ. ಕೆಟ್ಟೆ ಕೆಟ್ಟೆ ಶಿವಧೋ ಮಹಾದೇವ. ಹೊನ್ನು ಹೆಣ್ಣು ಮಣ್ಣಿನ ಆಶೆಯಿಂದ ಈ ಅವಸ್ಥೆಗೊಳಗಾದೆನು. ಇನ್ನಿವಕ್ಕಾಶೆಮಾಡೆನು, ನಿಮ್ಮ ಮರೆಯೆನು, ನಿಮ್ಮಾಣೆ. ಭಕ್ತವತ್ಸಲ, ಭಕ್ತದೇಹಿಕ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.