Index   ವಚನ - 13    Search  
 
ವಸ್ತುವೆಂದರೆ ಪರಬ್ರಹ್ಮದ ನಾಮವು. ಅಂತಪ್ಪ ವಸ್ತುವಿನ ಕಳೆ, ಆ ವಸ್ತುವಿನ ನಿಲವು ಪೇಳ್ವೆ ಕೇಳಿರಯ್ಯ. ಅನಂತಹಸ್ತ, ಅನಂತಪಾದ, ಅನಂತಮುಖ, ಅನಂತನಯನ, ಅನಂತಕರಣ, ಅನಂತಾಂಗ, ಅನಂತ ಮಿಂಚಿನಲತೆ ಪ್ರಕಾಶದಂತೆ, ಅನಂತ ಚಂದ್ರ ಸೂರ್ಯಪ್ರಕಾಶದಂತೆ, ಅನಂತ ವಜ್ರ ವೈಡೂರ್ಯ ಮಾಣಿಕದ ಪ್ರಕಾಶದಂತೆ, ಇಂತೀ ನಿಲವನು, ಇಂತೀ ಪ್ರಕಾಶವನು ಗರ್ಭೀಕರಿಸಿಕೊಂಡು, ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯದಿಂದತ್ತತ್ತಲಾದ ಪರವಸ್ತು ಸ್ವಯಂಭುವಾಗಿರ್ದು ತನ್ನ ವಿನೋದಕ್ಕೆ ತಾನೆ ಶಂಭುರೂಪದಿಂ ಲೀಲಾಮೂರ್ತಿಯಾಗಿ, ಇಂತೀ ನಿಲವನು, ಇಂತೀ ಕಳೆಯನು ಧರಿಸಿ, ಘನಮಹಾಲಿಂಗವಾಗಿರ್ಪನು. ಅಂತಪ್ಪ ಘನಮಹಾಲಿಂಗವನು ಬಹಿಷ್ಕರಿಸಿ, ಶ್ರೀಗುರು ಶಿಷ್ಯನ ಕರಸ್ಥಳಕ್ಕೆ ಇಷ್ಟಲಿಂಗವ ಮಾಡಿ, ತೋರಿ ಕೊಟ್ಟ ಬಳಿಕ ಆ ಲಿಂಗದಲ್ಲಿ ತನ್ನ ತನುವನು ಅಡಗಿಸಿ, ಆ ತನುವಿನಲ್ಲಿ ಆ ಲಿಂಗವ ಸಂಬಂಧಿಸಿ, ಶಿಖಿ-ಕರ್ಪೂರದ ಸಂಯೋಗದ ಹಾಗೆ ಅಂಗಲಿಂಗವೆಂಬುಭಯ ನಾಮ ನಷ್ಟವಾಗಿರ್ಪಾತನೇ ಶಂಭು ಸ್ವಯಂಭುಗಿಂದತ್ತತ್ತ ತಾನೆ ನೋಡಾ, ಶಂಭು-ಎಂದಡೆ ಇಷ್ಟಲಿಂಗ, ಸ್ವಯಂಭು ಎಂದೊಡೆ ಪ್ರಾಣಲಿಂಗ, ಉಭಯದಿಂದತ್ತತ್ತವೆಂದೊಡೆ ಭಾವಲಿಂಗ. ಅಂತಪ್ಪ ಭಾವಲಿಂಗಸ್ವರೂಪ ಶರಣ ತಾನೆ ನೋಡಾ ಎಂದನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.