Index   ವಚನ - 12    Search  
 
ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ. ಆದಿ, ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಕಲ್ಪಾಂತರ ಇರ್ದು ತನ್ನ ಸ್ವಲೀಲೆಯಿಂದ ತಾನೇ ಜಗತ್ಸೃಷ್ಟಿ ನಿಮಿತ್ತವಾಗಿ, ನೆನವುದೋರಲು, ಆ ನೆನವು ನಿರ್ಧರವಾಗಿ ಚಿತ್ತೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗದಿಂದ ಆತ್ಮ ಜನನ ; ಆತ್ಮದಿಂದ ಭಾವ ಪುಟ್ಟಿತ್ತು. ಆ ಭಾವದಿಂದ ಮೋಹ ಪುಟ್ಟಿತ್ತು. ಆ ಮೋಹವೆಂದಡೆ, ಮಾಯವೆಂದಡೆ, ಆಶೆಯೆಂದಡೆ, ಮನವೆಂದಡೆ ಏಕಪರ್ಯಾಯಾರ್ಥ. ಇಂತಪ್ಪ ಮೋಹದಿಂದ ತ್ರೈಲೋಕ ಮೊದಲಾಗಿ ಚತುರ್ದಶ ಭುವನಂಗಳು ಪುಟ್ಟಿದವು. ಆ ಚತುರ್ದಶ ಭುವನದ ಮಧ್ಯದಲ್ಲಿ ಇರುವೆ ಮೊದಲು ಆನೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವರಾಶಿಯೊಳಗೆ ದೇವ-ದಾನವ-ಮಾನವರು ಮೊದಲಾದ ಹೆಣ್ಣು-ಗಂಡು, ಸಚರಾಚರಂಗಳೆಲ್ಲವು ಉತ್ಪತ್ತಿಯಾದವು. ಇಂತೀ ಎಲ್ಲವು ಪರಶಿವನ ನೆನವುಮಾತ್ರದಿಂದ ಮರೀಚಿಕಾಜಲದಂತೆ, ಸುರಚಾಪದಂತೆ, ತೋರಿ ತೋರಿ ಅಡಗುವವಲ್ಲದೆ ನಿಜವಲ್ಲ ಮಿಥ್ಯವೆಂದು ತಿಳಿದು ವಿಸರ್ಜಿಸಿ ಬಿಡುವಾತ ತಾನೇ ಪರಶಿವನೆಂದು ತಿಳಿವುದಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.