Index   ವಚನ - 18    Search  
 
ಹರಹರಾ, ಈ ಮಾಯೆ ಇದ್ದೆಡೆಯ ನೋಡಾ ! ಶಿವಶಿವಾ, ಈ ಮಾಯೆ ಇದ್ದೆಡೆಯ ನೋಡಾ ! ಪುರುಷನ ಮುಂದೆ ಸ್ತ್ರೀಯಾಗಿರ್ಪಳು, ಸ್ತ್ರೀಯ ಮುಂದೆ ಪುರುಷನಾಗಿರ್ಪುದ ಕಂಡೆ. ಕೂಟಕ್ಕೆ ಸತಿಯಾಗಿರ್ಪಳು, ಮೋಹಕ್ಕೆ ಮಗಳಾಗಿರ್ಪಳು ಕಂಡೆ. ಜನನಕ್ಕೆ ತಾಯಾಗಿರ್ಪಳು, ಮೋಹವಿಳಾಸಕ್ಕೆ ಜಾರಸ್ತ್ರೀಯಾಗಿರ್ಪಳು ಕಂಡೆ. ಧರ್ಮಕ್ಕೆ ಕರ್ಮರೂಪಿಣಿಯಾಗಿರ್ಪಳು, ಕರ್ಮಕ್ಕೆ ಧರ್ಮರೂಪಿಣಿಯಾಗಿರ್ಪಳು ಕಂಡೆ. ಯೋಗಿಗಳೆಂಬವರ ಭೋಗಕ್ಕೆ ಒಳಗುಮಾಡಿತ್ತು, ಭೋಗಿಗಳೆಂಬವರ ಯೋಗಿಗಳ ಮಾಡಿತ್ತು ಕಂಡೆ. ಇಂತಪ್ಪ ಮಾಯೆಯ ಗೆಲುವಡೆ ತ್ರೈಲೋಕದೊಳಗೆ ದೇವ ದಾನವ ಮಾನವರು ಮೊದಲಾದವರ ನಾನಾರನು ಕಾಣೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.