Index   ವಚನ - 19    Search  
 
ಇಂತಪ್ಪ ಮಾಯೆಯ ಗೆಲಲರಿಯದೆ ಮುಂದೆ ಮೋಕ್ಷವ ಹಡೆಯಬೇಕೆಂಬಣ್ಣಗಳ ಮುಕ್ತಿಯ ಪೇಳುವೆ. ಅದೆಂತೆನೆ: ಕ್ಷುತ್ತಿಗೆ ಭಿಕ್ಷೆ, ಶೀತಕ್ಕೆ ರಗಟೆ, ಮಾತಿಗೆ ಮಂತ್ರ, ನಿದ್ರೆಗೆ ಶಿವಧ್ಯಾನ. ಇಂತಪ್ಪ ಶಿವಾಚಾರಮಾರ್ಗವನು ಹಿಡಿದು ಆಚರಿಸಿ ಮುಂದೆ ಶಿವಪಥವ ಸಾಧಿಸಬೇಕಲ್ಲದೆ, ಇಂತೀ ಗುರುವಾಕ್ಯವ ಮೀರಿ, ಹೊನ್ನೊಂದು ಬಿಳುಪಿನ ಮಲ, ಹೆಣ್ಣೊಂದು ಕೆಂಪಿನ ಮಲ, ಮಣ್ಣೊಂದು ಕಪ್ಪಿನ ಮಲ- ಇಂತೀ ತ್ರಿವಿಧಮಲವ ತಿಂದು ಸಂಸಾರವಿಷಯರಸವೆಂಬ ಕಾಳಕೂಟ ನೀರು ಕುಡಿದು, ಮುಂದೆ ನಾವು ಶಿವಪಥವ ಸಾಧಿಸಿ ಮುಕ್ತಿಯ ಹಡೆಯಬೇಕೆಂಬ ಯುಕ್ತಿಗೇಡಿಗಳು ಈ ಹೀಂಗೆ ಪ್ರಪಂಚವಮಾಡಿ ಇದರೊಳಗೆ ಮೋಕ್ಷವೆಂದು, ಇದನ್ನು ಬಿಟ್ಟರೆ ಮೋಕ್ಷವಿಲ್ಲವೆಂದು ಯುಕ್ತಿಹೇಳುವ ಯುಕ್ತಿಗೇಡಿಗಳ ಈ ಮಾತ ಸಾದೃಶ್ಯಕ್ಕೆ ತಂದು, ಆಚಾರಹೇಳುವ ಅನಾಚಾರಿಗಳ ಈ ಉಭಯಭ್ರಷ್ಟ ಹೊಲೆಮಾದಿಗರ ನಾಲಿಗೆಯ ಶಿರಸಿನ ಹಿಂಭಾಗದಲ್ಲಿ ಸೀಳಿ, ಅವರ ನಾಲಿಗೆಯ ಹಿರಿದು ತೆಗೆದು ಕೆರವಿನಟ್ಟೆಗೆ ಹಾಕೆಂದಾತ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.