Index   ವಚನ - 20    Search  
 
ಮನೆಯೆನ್ನದು, ಧನವೆನ್ನದು, ತನುವೆನ್ನದು, ಮಾತಾಪಿತರು, ಸತಿಸುತರು ಎನ್ನವರು, ಸ್ನೇಹಿತರು ಬಾಂಧವರು ಎನ್ನವರು ಎಂದರೆ ಭಕ್ತಿ ಭಿನ್ನವಾಯಿತ್ತು. ಅವನಿಗೆ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ, ಜಂಗಮವಿಲ್ಲವಾಗಿ ಪಾದೋದಕ ಪ್ರಸಾದವಿಲ್ಲ, ಪಾದೋದಕ ಪ್ರಸಾದವಿಲ್ಲವಾಗಿ ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾಗಿ ಅಷ್ಟಾವರಣಂಗಳಿಲ್ಲ. ಇಂತಪ್ಪ ಪಂಚಮಹಾಪಾತಕರಿಗೆ ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ. ಇಂಥ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ, ಸಕಲ ಪ್ರಪಂಚವನೆಲ್ಲವನು ನಿವೃತ್ತಿಯಂ ಮಾಡಿ, ಹಿಂದೆ ಹೇಳಿದ ಗುರುಮಾರ್ಗ ಆಚಾರವನು ವಿಚಾರಿಸಿ ತಿಳಿದಲ್ಲದೆ ಶಿವಪಥವೆಂದಿಗೂ ಸಾಧ್ಯವಾಗದು. ಇದನರಿಯದೆ ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು, ಲೋಭ ಮೋಹದಲ್ಲಿ ಮಗ್ನರಾಗಿ, ಮದಮತ್ಸರದಲ್ಲಿ ಮುಂದುಗಾಣದೆ, ಅಷ್ಟಮದದಲ್ಲಿ ಕಟ್ಟುವಡೆದು, ದಶವಾಯುಗಳಲ್ಲಿ ಹರಿದಾಡಿ, ಹೀಗೆ ಭವದತ್ತ ಮುಖವಾಗಿ ಹೊತ್ತುಗಳೆದು ಸತ್ತು ಹೋಗುವ ಹೇಸಿ ಮೂಳರ ಹಿಡಿತಂದು, ಅವರ ಮೂಗು ಹಲ್ಲು ಮೋರೆ ಕೊಯಿದು ಕಟವಾಯಿ ಸೀಳಿ ಕನ್ನಡಿಯ ತೋರಿ, ಅವನ ಬಾಯಲ್ಲಿ ಸಣ್ಣ ಸುಣ್ಣ ಮೆಣಸಿನ ಹಿಟ್ಟು ತುಂಬಿ ಮೇಲು ಮುಂದಾಗಿ ನಮ್ಮ ಗಣಂಗಳ ಪಾದರಕ್ಷೆಯಲ್ಲಿ ಘಟ್ಟಿಸಿ ಅಟ್ಟೆಂದಾತ ನಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.