Index   ವಚನ - 24    Search  
 
ಶಿವಶಿವಾ, ನಾವು ಗುರುಗಳು, ನಾವು ಜಂಗಮಲಿಂಗಪ್ರೇಮಿಗಳು, ನಾವು ಪಟ್ಟದಯ್ಯಗಳು, ನಾವು ಚರಂತಿಯ ಹಿರಿಯರು, ನಾವು ಸದಾಚಾರ ಸತ್ಯಸದ್ಭಕ್ತರೆಂದು ಬೊಗಳುತ್ತಿಪ್ಪಿರಿ. ಅದೆಲ್ಲಿಯದೊ ಸದಾಚಾರ ? ಮಣ್ಣುಹಿಡಿದವಂಗೆ ಗುರುವಿಲ್ಲ, ಹೆಣ್ಣುಹಿಡಿದವಂಗೆ ಲಿಂಗವಿಲ್ಲ, ಹೊನ್ನುಹಿಡಿದವಂಗೆ ಜಂಗಮವಿಲ್ಲ. ಇಂತೀ ತ್ರಿವಿಧಮಲವ ಕಚ್ಚಿದ ಶೂಕರ ಶುನಿಗಳಿಗೆ ತೀರ್ಥಪ್ರಸಾದ ಅದೆಲ್ಲಿಯದೋ ? ಇಲ್ಲವಾಗಿ, ಅಷ್ಟಾವರಣವು ಇಲ್ಲ. ಇಂತಪ್ಪ ಪಂಚಮಹಾಪಾತಕರು ನಾವು ಮೋಕ್ಷವ ಹಡೆಯಬೇಕೆಂದು ಗುರು-ಲಿಂಗ-ಜಂಗಮವ ತಮ್ಮಂಗದಿಂದಿದಿರಿಟ್ಟು ಪೂಜೋಪಚಾರವ ಮಾಡಿ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧ ಖಂಡಿತಫಲಪದವ ಪಡೆದು, ಅನುಭವಿಸಿ ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷದ ಭವಮಾಲೆಯಲ್ಲಿ ಬಪ್ಪುದು ತಪ್ಪುದು. ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ ಸಕಲ ಪ್ರಪಂಚವೆಲ್ಲವನು ನಿವೃತ್ತಿಯ ಮಾಡಿ ದ್ವೈತಾದ್ವೈತವ ನಷ್ಟವ ಮಾಡಿ, ಸಕಲ ಸಂಸಾರ ವ್ಯಾಪರದ ವ್ಯಾಕುಲಚಿಂತನೆಯ ಬಿಟ್ಟು, ನಿಶ್ಚಿಂತನಾಗಿ ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾಧಿಸಬೇಕಲ್ಲದೆ ಇದನರಿಯದೆ ತನು-ಮನ-ಧನದ ಪ್ರಕೃತಿಯಲ್ಲಿ ಹರಿದಾಡಿ ಮಾತಾಪಿತರು, ಸತಿಸುತರು, ಸ್ನೇಹಿತರು, ಬಾಂಧವರು ಎನ್ನವರು ಎಂದು ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ತಿಂದು ಸಂಸಾರ ರಸೋದಕವೆಂಬ ನೀರು ಕುಡಿದು ಹಾಳಕೇರಿಗೆ ಹಂದಿ ಜಪಯಿಟ್ಟ ಹಾಂಗೆ ಈ ಸಂಸಾರವೆಂಬ ಹಾಳಕೇರಿಗೆ ಜೀವನೆಂಬ ಹಂದಿ ಮೆಚ್ಚಿ ಮರುಳಾಗಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಹೇಸಿ ಮೂಳ ಹೊಲೆಮಾದಿಗರಿಗೆ ಶಿವಪಥವು ಎಂದಿಗೂ ಸಾಧ್ಯವಿಲ್ಲವೆಂದಾತ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.