Index   ವಚನ - 23    Search  
 
ಶಿವಶಿವಾ, ಈ ಮಾಯಾಸಂಸಾರಯುಕ್ತವಾದ ದೇಹದ ಸುಖ ಹೇಳಲಂಜುವೆ. ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಈ ದೇಹದ ವಿಸ್ತಾರ ಪೇಳ್ವೆ, ಎಲೆ ಮರುಳ ಮಾನವರಿರಾ, ಲಾಲಿಸಿ ಕೇಳಿರಿ, ಎಲುವಿನ ಕಂಬ, ಎಲುವಿನ ತೊಲೆಗಳು, ಸಂದೆಲವುಗಳೆ ಬಿಗಿ ಮೊಳೆಗಳು, ಕರುಳಜಾಳಿಗೆ ಬಿಗಿಜಂತಿಗಳು, ಬರುಕಿ ಎಲವುಗಳೆ ಜಂತಿಗಳು, ಬೆರಳೆಲವುಗಳೆ ಚಿಲಿಕೆಗಳು. ಇಂತೀ ಗೃಹಕ್ಕೆ ಮಾಂಸದ ಮೇಲುಮುದ್ದೆಗಳು, ರಕ್ತದ ಸಾರಣೆಗಳು, ಮಜ್ಜದ ಮಡುಗಳು, ಕೀವಿನ ಕುಣಿಗಳು, ಪಿತ್ತದ ಕೊಂಡಗಳು, ಶೋಣಿತದ ಕಾವಲಿಗಳು, ಮೂತ್ರದ ಹಳ್ಳಗಳು, ಅಮೇಧ್ಯದ ಹುತ್ತಗಳು, ಹುಳುವಿನ ಡೋಣಿಗಳು, ಜಂತಿನ ಬಣವೆಗಳು-ಇಂತಪ್ಪ ಮನಗೆ ಎಂಟು ಗವಾಕ್ಷಗಳು. ಬಾಯಿ ಎಂಬುದೊಂದು ದೊಡ್ಡ ದರವಾಜು. ಇಂತೀ ದುರಾಚಾರಯುಕ್ತವಾದ ದೇಹವೆಂಬ ಗೃಹಕ್ಕೆ ಮೂವರು ಕರ್ತೃಗಳಾಗಿಹರು. ಅವರು ಆರಾರೆಂದಡೆ: ಹೊನ್ನೊಂದು ಭೂತ, ಹೆಣ್ಣೊಂದು ಭೂತ, ಮಣ್ಣೊಂದು ಭೂತ. ಇಂತೀ ತ್ರಿವಿಧ ಭೂತಸ್ವರೂಪರಾದ ಬ್ರಹ್ಮ ವಿಷ್ಣು ರುದ್ರರೆಂಬ ತ್ರಿವಿಧದೇವತೆಗಳು. ಅದೆಂತೆಂದಡೆ: ಹೊನ್ನು ರುದ್ರನಹಂಗು, ಹೆಣ್ಣು ವಿಷ್ಣುವಿನಹಂಗು, ಮಣ್ಣು ಬ್ರಹ್ಮನಹಂಗು. ಇಂತಪ್ಪ ತ್ರಿಮೂರ್ತಿಗಳ ಹಂಗಿನಿಂದಾದ ದೇಹವು ಮಿಥ್ಯೆಯೆಂದು ತಿಳಿದು ವಿಸರ್ಜಿಸಲರಿಯದೆ, ಆ ಅನಿತ್ಯದೇಹದ ಸುಖವನು ಮೆಚ್ಚಿ ಮರುಳಾಗಿ, ಬಿಡಲಾರದೆ, ಈ ಹೇಸಿಕಿ ಹೊಲೆಸಂಸಾರದಲ್ಲಿ ಶಿಲ್ಕಿ ಮಲತ್ರಯದಾಶೆಗೆ ಹೊಡದಾಡಿ ಹೊತ್ತುಗಳೆದು ಸತ್ತುಹೋಗುವ ಕತ್ತೆಗಳಿಗಿನ್ನೆತ್ತಣ ಮುಕ್ತಿ ಹೇಳಾ ! ಮುಂದೆ ಹೊಲೆಮಾದಿಗರ ಮನೆಯಲ್ಲಿ ಶುನಿ ಶೂಕರ ಕುಕ್ಕುಟನ ಬಸುರಲ್ಲಿ ಹುಟ್ಟಿಸದೆ ಬಿಡನೆಂದಾತ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.