Index   ವಚನ - 28    Search  
 
ಶಿವಶಿವಾ, ಈ ಮರುಳಮಾನವರು ಸಟೆಯ ಸಂಸಾರದಲ್ಲಿ ಸಿಲ್ಕಿ, ತಾವಾರೆಂಬುದನರಿಯದೆ, ತಮ್ಮ ನಿಜಸ್ವರೂಪವ ಮರೆದು ಕೆಟ್ಟ ಕೇಡ ಹೇಳುವೆನು ಕೇಳಿರಯ್ಯ. ಹುಲಿಯ ಬಾಯ ಕುರಿಯ ಹಾಗೆ, ತೋಳನ ಬಾಯ ಮರಿಯ ಹಾಗೆ, ಸರ್ಪನ ಬಾಯ ಕಪ್ಪೆಯ ಹಾಗೆ, ಬೆಕ್ಕಿನ ಬಾಯ ಇಲಿಯ ಹಾಗೆ, ಕಟುಕನ ಕೈಯ ಹೋತಿನ ಹಾಗೆ, ರಾಜನ ಕೈಯ ಚೋರನ ಹಾಗೆ, ಇಂತೀ ದೃಷ್ಟಾಂತದಂತೆ- ಮಾಯಾಕಾಳರಕ್ಕಸಿಯ ಮೂರು ಮುಖದಲ್ಲಿ- ಆ ಮೂರು ಮುಖ ಆವಾವೆಂದಡೆ: ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿಮುಖದೊಳಗೆ ಗೋಪ್ಯಮುಖ, ಸಂದ ಮುಖಗಳುಂಟು, ಪೇಳ್ವೆ. ಜಾಗ್ರಾವಸ್ಥೆಯೇ ವಕ್ತ್ರವಾಗುಳ್ಳ ಮಣ್ಣಿನಲ್ಲಿ ಕಾಮ ಕ್ರೋಧ ಲೋಭವೆಂಬ ತ್ರಿವಿಧಮುಖವು. ಸ್ವಪ್ನಾವಸ್ಥೆಯೇ ವಕ್ತ್ರವಾಗುಳ್ಳ ಹೆಣ್ಣಿನಲ್ಲಿ ಘ್ರಾಣ, ಜಿಹ್ವೆ, ನೇತ್ರ, ಶ್ರೋತ್ರ, ತ್ವಕ್ಕುಯೆಂಬ ಪಂಚಮುಖವು. ಸುಷುಪ್ತಾವಸ್ಥೆಯೇ ವಕ್ತ್ರವಾಗುಳ್ಳ ಹೊನ್ನಿನಲ್ಲಿ ಪ್ರಾಣಾದಿ ಧನಂಜಯಾಂತ್ಯಮಾದ ದಶವಾಯುಗಳೇ ದಶಮುಖವಾಗಿರ್ಪವು. ಇಂತೀ ತ್ರಿವಿಧಮುಖ ಮೊದಲುಮಾಡಿಕೊಂಡು ಹಲವು ಮುಖದಿಂದ ಹರಿಹರಿದುಕೊಂಡು ತಿಂದು ಹಿಂಡಿ ಹಿಪ್ಪಿಯ ಮಾಡುವಾಗ ಹಿಂದೆ ಹೇಳಿದ ದೃಷ್ಟಾಂತದಂತೆ ಮಾಯೆಯೆಂಬ ಹೊಲೆಯಲ್ಲಿ ಶಿಲ್ಕಿ ಈರೇಳುಲೋಕವೆಲ್ಲ, ಆಳುತ್ತ, ಮುಳುಗುತ್ತ ಆಲಪರಿದು, ಚಾಲಿವರಿದು ಎಂಭತ್ತುನಾಲ್ಕುಲಕ್ಷ ಭವಮಾಲೆಯಲ್ಲಿ ಸತ್ತುಹೋದ ಪ್ರಾಣಿಗಳಿಗೆ ಇನ್ನೆತ್ತಣ ಮುಕ್ತಿಯಯ್ಯಾ. ಇಂತೀ ಮರುಳಮಾನವರ ಕಂಡು ಬೆಕ್ಕನೆ ಬೆರಗಾಗಿ ಹೊಟ್ಟೆಹುಣ್ಣಾಗುವನ್ನಕ್ಕರ ನಕ್ಕು ಶಬ್ದಮುಗ್ಧನಾಗಿ ಸುಮ್ಮನಿರ್ದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.