ಶಿವಶಿವಾ, ಈ ಸಂಸಾರದಂದುಗ ದುಃಖ ನಾನೆಂತು ಪೇಳ್ವೆ.
ಹೊನ್ನಿನ ವ್ಯಾಪಾರವ ಮಾಡಿ, ಧಾವತಿಯಿಂದ ಗಳಿಸುವದು ದುಃಖ.
ಆ ಹೊನ್ನು ಜೋಕೆಮಾಡುವದು ದುಃಖ.
ಆ ಹೊನ್ನು ಹೋದಮೇಲೆ ಅನೇಕ ದುಃಖ.
ಹೆಣ್ಣು ತರುವದು ದುಃಖ; ಆ ಹೆಣ್ಣು ಆಳುವದು ದುಃಖ.
ಹೆಣ್ಣು ಸತ್ತುಹೋದಮೇಲೆ ಅನೇಕ ದುಃಖ.
ಮಣ್ಣು ದೊರಕಿಸುವದು ದುಃಖ.
ಆ ಮಣ್ಣಿನ ಧಾವತಿ ಹೋರಾಟ ಮಾಡುವದು ದುಃಖ.
ಆ ಮಣ್ಣು ನಾಶವಾದ ಮೇಲೆ ಅನೇಕ ದುಃಖ.
ಇಂತೀ ತ್ರಿವಿಧವು ಮಲಸಮಾನವೆಂದರಿಯದೆ,
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂಬಿರಿ.
ಎಲೆ ಹುಚ್ಚು ಮರುಳು ಮಾನವರಿರಾ,
ನೀವು ಮರಣವಾದ ಮೇಲೆ ಅವು ನಿಮ್ಮ ಕೂಡ ಬರ್ಪವೆ ?
ಬರ್ಪುದಿಲ್ಲ ಕೇಳಾ, ಎಲೆ ಹುಚ್ಚ ಮರುಳ ಮಾನವರಿರಾ,
ಅವು ಆರ ಒಡವೆ ಎಂದರೆ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ.
ಹೊನ್ನು ರಾಜನದು, ಹೆಣ್ಣು ಅನ್ಯರದು, ಮಣ್ಣು ಬಲ್ಲಿದರದು.
ಇಂತೀ ತ್ರಿವಿಧವು ಅನಿತ್ಯವೆಂದು
ತನ್ನ ಸ್ವಾತ್ಮಜ್ಞಾನದಿಂದ ತಿಳಿದೆಚ್ಚತ್ತು ವಿಸರ್ಜಿಸಿ,
ಗುರುಕಾರುಣ್ಯಮಂ ಪಡೆದು, ಲಿಂಗಾಂಗಸಂಬಂಧಿಯಾಗಿ,
ಗುರೂಪಾವಸ್ತೆಯಂ ಮಾಡಿ, ಮುಂದೆ ಮೋಕ್ಷವ ಹಡೆಯಬೇಕೆಂಬ
ಯುಕ್ತಿ ವಿವೇಕ ವಿಚಾರ ಬುದ್ಧಿಯನರಿಯದೆ
ಅಶನಕ್ಕಾಗಿ ಮಣ್ಣ ಮೆಚ್ಚಿ, ವ್ಯಸನಕ್ಕಾಗಿ ಹೊನ್ನ ಮೆಚ್ಚಿ,
ಅಂಗಸುಖಕ್ಕಾಗಿ ಹೆಣ್ಣ ಮೆಚ್ಚಿ-
ಇಂತೀ ತ್ರಿವಿಧ ಆಶೆ ಆಮಿಷ ಮಮಕಾರದಿಂದ ಮನಮಗ್ನರಾಗಿ,
ಮತಿಗೆಟ್ಟು ಮುಂದುಗಾಣದೆ,
ಸಟೆಯ ಸಂಸಾರದಲ್ಲಿ ಹೊಡದಾಡಿ
ಹೊತ್ತುಗಳೆದು ವ್ಯರ್ಥ ಸತ್ತುಹೋಗುವ
ಕತ್ತೆಸೂಳೆಮಕ್ಕಳ ಬಾಳ್ವೆ ಶುನಿ ಸೂಕರ ಕುಕ್ಕುಟನ
ಬಾಳ್ವೆಗಿಂದತ್ತತ್ತಯೆಂದಾತ ನಿಮ್ಮ ಶರಣ ವೀರಾಧಿವೀರ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.