Index   ವಚನ - 45    Search  
 
ಶಿವಾಶಿವಾ, ಗುರು ಲಿಂಗಾಂಗಿ ಜಂಗಮ ಭಕ್ತರ ಭೇದವ ಪೇಳ್ವೆ ಕೇಳಿರಯ್ಯಾ. ಶೆರೆಯ ಕುಡಿದವನೇ ಗುರುವೆಂಬೆ. ಸುರೆಯ ಕುಡಿದವನೇ ಲಿಂಗಾಂಗಿಯೆಂಬೆ. ಕಂಡವ ತಿಂದವನೇ ಜಂಗಮವೆಂಬೆ. ಇಂತೀ ಮೂವರ ಕೊಂದು ತಿಂದವನ ಕೊಂದು ತಿಂದಾತನೇ ಭಕ್ತನೆಂಬೆ. ಇಂತಿದರ ಅನುಭಾವ ತಿಳಿಯಬಲ್ಲರೆ ಗುರು-ಲಿಂಗ-ಜಂಗಮ ಭಕ್ತನೆಂಬೆ. ಇಂತೀ ಚತುರ್ವಿಧದ ನಿರ್ಣಯವ ಹೇಳಿದಾತನೇ ಅನಾದಿಗುರುಲಿಂಗಜಂಗಮವೆಂಬೆ. ಆತನಲ್ಲಿ ಉಪದೇಶವ ಹಡೆಯಬೇಕು. ಇಂತಿದರ ಭೇದವ ತಿಳಿಯಬಲ್ಲಾತನೇ ಅನಾದಿ ಶಿಷ್ಯ ಭಕ್ತನೆಂಬೆ. ಇಂತಿವರಿಗೆ ಉಪದೇಶವ ಹೇಳಬೇಕು. ಇಂತಪ್ಪ ಗುರುಶಿಷ್ಯಸಂಬಂಧವೆಂತೆಂದೊಡೆ: ಶಿಖಿ-ಕರ್ಪುರ ಸಂಯೋಗದಂತೆ. ಪಯೋಧರಫಲ ಉದಕದಲ್ಲಿ ಲೀಯವಾದಂತೆ. ಲವಣ ಸಮುದ್ರದಲ್ಲಿ ಲೀಯವಾದಂತೆ. ಈ ಗುರುಶಿಷ್ಯರುಭಯರು ಕೂಡಿ ಪರಶಿವಸಾಗರದಲ್ಲಿ ನಿರ್ವಯಲಾದರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.