Index   ವಚನ - 46    Search  
 
ಶಿವಶಿವಾ, ಈ ಲೋಕದೊಳಗೆ ನಾವು ಗುರುಗಳು, ನಾವು ಚರಂತಿಹಿರಿಯರೆಂದು ಬಂದು ದೀಕ್ಷೋಪದೇಶ ಅಯ್ಯತನವ ಮಾಡುವೆವೆಂದು ಹೇಳಿಕೊಂಬರಯ್ಯ. ಅದೆಂತೆಂದೊಡೆ: ಭಕ್ತರ ದೀಕ್ಷೋಪದೇಶವ ಮಾಡುವ ಕಾಲಕ್ಕೆ ಅವರ ಮನೆಯೊಳಗಣ ಗಡಿಗೆ ಮಡಕೆಯ ಹೊರೆಯಕ್ಕೆ ಹಾಕಿಸಿ, ಮೈಲಿಗೆ ಮುಟ್ಟಚಟ್ಟನೆಲ್ಲವ ತೊಳಿಸಿ, ಗೃಹವನೆಲ್ಲ ಸಾರಣೆಯ ಮಾಡಿಸಿ, ಹೊಸ ಮಡಕೆಯ ತರಿಸಿ, ಆ ಭಕ್ತರ ಮಂಡೆಯ ಬೋಳಿಸಿ, ಮೈಯ ತೊಳಸಿ, ಹೊಸ ವಸ್ತ್ರವ ಉಡಿಸಿ, ತೊಡಿಸಿ, ಹೊದಿಸಿ, ಅವರ ಪೂರ್ವದ ಲಿಂಗವನೆಲ್ಲ ವಿಚಾರಿಸಿ ನೋಡಿ ಭಿನ್ನವಾದ ಲಿಂಗವನೆಲ್ಲ ತೆಗೆದು ಪ್ರತ್ಯೇಕಲಿಂಗವ ತಂದು, ವೇಧಾಮಂತ್ರಕ್ರೀಯೆಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ ಅವರಂಗದ ಮೇಲೆ ಲಿಂಗವ ಧರಿಸಿ ಮಾಂಸಪಿಂಡವಳಿದು ಮಂತ್ರಪಿಂಡವಾಯಿತು, ಭವಿಜನ್ಮವಳಿದು ಭಕ್ತನಾದೆ, ಪೂರ್ವಜನ್ಮವಳಿದು ಪುನರ್ಜಾತನಾದೆ ಎಂದು ಅವರಂಗದ ಮೇಲೆ ಲಿಂಗಧಾರಣ ಮಾಡಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಸದ್ಭಕ್ತರಾದಿರೆಂದು ಅವರನು ಬೋಳೈಸಿಕೊಂಡು ತಮ್ಮ ಒಡಲ ಹೊರೆವರಲ್ಲದೆ ಇವರು ಸದ್ಭಕ್ತರ ಮಾಡಲರಿಯರು. ಸದ್ಭಕ್ತರ ಮಾಡುವ ಪರಿಯ ಪೇಳ್ವೆ. ಅದೆಂತೆಂದೊಡೆ: ಪಂಚಭೂತ ಮಿಶ್ರವಾದ ದೇಹವೆಂಬ ಘಟವನು ತೆಗೆದು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಪಂಚಲಕ್ಷಣವುಳ್ಳ ಚಿದ್ಘಟವ ತಂದು, ಸಂಕಲ್ಪ ವಿಕಲ್ಪ, ಸಂಸಾರಸೂತಕವೆಂಬ ಮುಟ್ಟು ಚಟ್ಟನೆಲ್ಲ ಚಿಜ್ಜಲದಿಂದ ತೊಳೆದು, ಮಾಯಾ ಮೋಹವೆಂಬ ಹೊದಿಕೆಯ ತೆಗೆಸಿ, ನಿರ್ಮಾಯ ನಿರ್ಮೋಹವೆಂಬ ವಸ್ತ್ರವನುಡಿಸಿ ತೊಡಿಸಿ, ಆಶೆ ಎಂಬ ಕೇಶವ ಬೋಳಿಸಿ, ಅವನ ಹಲ್ಲು ಕಳೆದು, ನಾಲಿಗೆಯ ಕೊಯ್ದು, ಕಣ್ಣುಗುಡ್ಡಿಯ ಮೀಟಿ, ಎರಡು ದಾಡಿಯ ಮುರಿಗುಟ್ಟಿ, ತಲೆ ಹೊಡೆದು, ಕೈಕಾಲು ಕಡಿದು, ತಿದಿಯ ಹರಿದು, ಸಂದ ಮುರಿದು, ಹಂದಿ ನಾಯಿಯ ಕೊಂದು ಕಂಡವ ತಿನಿಸಿ, ಕಪ್ಪೆಯ ಉಚ್ಚಿಯ ಕುಡಿಸಿ, ಇಂತೀ ಪರಿಯಲ್ಲಿ ದೀಕ್ಷೋಪದೇಶವ ಮಾಡಿ ಲಿಂಗವ ಕೊಡಬಲ್ಲರೆ ಗುರುವೆಂಬೆ. ಇಲ್ಲವಾದರೆ ಕಳ್ಳಗುರುಕಿಮಕ್ಕಳೆಂಬೆ. ಇಂತಪ್ಪ ವಿಚಾರವ ತಿಳಿದುಕೊಳ್ಳಬಲ್ಲರೆ ಭಕ್ತರೆಂಬೆ. ಇಲ್ಲದಿದ್ದರೆ ಬದ್ಧಭವಿಗಳೆಂಬೆ. ಇಂತೀ ತರುವಾಯದಲ್ಲಿ ಅಯ್ಯತನವ ಮಾಡಬಲ್ಲರೆ ಚರಂತಿಹಿರಿಯರು ಎಂಬೆ. ಇಲ್ಲದಿದ್ದರೆ ಮೂಕೊರತಿ ಮೂಳಿಯ ಮಕ್ಕಳೆಂಬೆ. ಇಂತೀ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದುಕೊಳ್ಳಬೇಕಲ್ಲದೆ, ಈ ಲೋಕದ ಜಡಜೀವರು ಕಡುಪಾತಕರಲ್ಲಿ ಕೊಳ್ಳಲುಬಾರದು. ಅದೇನು ಕಾರಣವೆಂದೊಡೆ: ತಾವಾರೆಂಬ ತಮ್ಮ ನಿಲವ ತಾವರಿಯರು, ಇನ್ನೊಬ್ಬರಿಗೆ ಏನು ಹೇಳುವರಯ್ಯ? ಇಂತಪ್ಪ ಮೂಢಾತ್ಮರಲ್ಲಿ-ಇದಕ್ಕೆ ದೃಷ್ಟಾಂತ: ಹಿತ್ತಲಲ್ಲಿ ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ, ಬಾವಿಯೊಳಗೆ ಕೊಡಕ್ಕೆ ಹಗ್ಗವ ಕಟ್ಟಿ ಬಿಟ್ಟಂತೆ, ನಾವು ನಮ್ಮ ಪಾದದಲ್ಲಿ ಮರೆಯ ಮಾಡಬೇಕೆಂದು, ತಮ್ಮ ಕಾಲಿಗೆ ಒಂದೊಂದು ಪೋರಗಳ ಕಟ್ಟಿಕೊಂಡು ಅಡ್ಡಡ್ಡ ಬಿದ್ದು ಮರಿಯ ಪಡಕೊಂಬವರ, ಆ ಮರಿಗಳಿಗೆ ಅಯ್ಯತನ ಮಾಡಿದೆವು ಎಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಮೂಗ ಕೊಯಿದು ಕನ್ನಡಿಯ ತೋರಿ ಮೂಗಿನೊಳಗೆ ಮೆಣಸಿನಹಿಟ್ಟು ತುಂಬಿ ಸಂಗನ ಶರಣರ ಪಾದರಕ್ಷೆಯಲ್ಲಿ ಘಟ್ಟಿಸಿ, ಮೂಡಲ ದಿಕ್ಕಿಗೆ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.