Index   ವಚನ - 56    Search  
 
ಕಕ್ಷೆ ಕರಸ್ಥಲ ಹೃದಯ ಕಂಠ ಉತ್ತಮಾಂಗ ಅಮಳೋಕ್ಯವೆಂಬ ಷಟ್‍ಸ್ಥಾನದಲ್ಲಿ ಲಿಂಗವ ಧರಿಸಬೇಕೆಂಬರು ವೇಷಧಾರಿಗಳು. ಅದೆಂತೆಂದೊಡೆ: ಕರಸ್ಥಲದಲ್ಲಿ ಲಿಂಗವ ಧರಿಸುವರೆಲ್ಲ ಸನ್ಯಾಸಿಗಳೆನಿಸುವರು. ಕಕ್ಷೆಯಲ್ಲಿ ಲಿಂಗವ ಧರಿಸುವರೆಲ್ಲ ಮುಪ್ಪಿನ ಹಿರಿಯರೆನಿಸುವರು. ಹೃದಯದಲ್ಲಿ ಲಿಂಗವ ಧರಿಸುವರೆಲ್ಲ ಪ್ರೌಢಪತಿಯೆನಿಸುವರು. ಕಂಠದಲ್ಲಿ ಲಿಂಗವ ಧರಿಸುವರೆಲ್ಲ ಬಾಲಕರೆನಿಸುವರು. ಉತ್ತಮಾಂಗದಲ್ಲಿ ಲಿಂಗವ ಧರಿಸುವರೆಲ್ಲ ಯತಿಗಳೆನಿಸುವರು. ಅಮಳೋಕ್ಯದಲ್ಲಿ ಲಿಂಗವ ಧರಿಸುವರೆಲ್ಲ ಸಿದ್ಧರೆನಿಸುವರು. ಇಂತೀ ಷಡ್ವಿಧಸ್ಥಾನಂಗಳಲ್ಲಿ ಕಲ್ಪಿಸಿ ಲಿಂಗವ ಧರಿಸುವರೆಲ್ಲ ಷಟ್‍ಶೈವವಾದಿಗಳು ಇವರು ಲಿಂಗಧಾರಕರಲ್ಲ; ಇವರು ಲಿಂಗವೆಂಬ ಲಾಂಛನಧಾರಕರು ನೋಡೆಂದ ನಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.