Index   ವಚನ - 69    Search  
 
ಆರೂ ಇಲ್ಲದ ಭೂಮಿಯಲ್ಲಿ ಬೇರಿಲ್ಲದ ರುದ್ರಾಕ್ಷಿಯ ಮರ ಪುಟ್ಟಿತ್ತು. ನೀರಿಲ್ಲದೆ ಆ ವೃಕ್ಷ ಪಲ್ಲವಿಸಿತ್ತು. ಆ ವೃಕ್ಷಕ್ಕೆ ರಕ್ತವರ್ಣದ ಒಂದು ಕುಸುಮ ಪುಟ್ಟಿತ್ತು. ಆ ಕುಸುಮದಲ್ಲಿ ಒಂದುಮುಖದ ಮೂರುಮುಖದ ಸಹಸ್ರಮುಖದ ದ್ವಿಮುಖದ ಷೋಡಶಮುಖದ ದ್ವಾದಶಮುಖದ ದಶಮುಖದ ಷಣ್ಮುಖದ ಚತುರ್ವಿಧಮುಖದ ಬ್ರಹ್ಮ ಮೊದಲಾಗಿ ರುದ್ರಾಕ್ಷಿಗಳು ಪುಟ್ಟಿದವು ನೋಡಾ. ಅಂತಪ್ಪ ರುದ್ರಾಕ್ಷಿಗಳನು ಗುರುಮುಖದಿಂದ ಪಡಕೊಂಡು ಒಂದುಮುಖದ ರುದ್ರಾಕ್ಷಿಯನು ಸ್ವರ್ಗಲೋಕದಲ್ಲಿಟ್ಟು, ಮೂರುಮುಖದ ರುದ್ರಾಕ್ಷಿಯನು ಪಾತಾಳದಲ್ಲಿಟ್ಟುಕೊಂಡು ಸಹಸ್ರಮುಖದ ರುದ್ರಾಕ್ಷಿಯನು ಮರ್ತ್ಯಲೋಕದಲ್ಲಿಟ್ಟು ದ್ವಿಮುಖದ ರುದ್ರಾಕ್ಷಿಯನು ಬೈಲಲ್ಲಿಟ್ಟು, ಷೋಡಶಮುಖದ ರುದ್ರಾಕ್ಷಿಯನು ಆಕಾಶದಲ್ಲಿಟ್ಟು ದ್ವಾದಶಮುಖದ ರುದ್ರಾಕ್ಷಿಯನು ವಾಯುವಿನಲ್ಲಿಟ್ಟು, ದಶಮುಖದ ರುದ್ರಾಕ್ಷಿಯನು ಅಗ್ನಿಯಲ್ಲಿಟ್ಟು, ಷಣ್ಮುಖದ ರುದ್ರಾಕ್ಷಿಯನು ನೀರಲ್ಲಿಟ್ಟು ಚತುರ್ಮುಖದ ರುದ್ರಾಕ್ಷಿಯನು ಭೂಮಿಯಲ್ಲಿಟ್ಟು, ಇದಲ್ಲದೆ ಕೆಲವು ರುದ್ರಾಕ್ಷಿಗಳನು ಬ್ರಹ್ಮಾಂಡದಲ್ಲಿಟ್ಟು ಇಂತೀ ಕ್ರಮದಲ್ಲಿ ರುದ್ರಾಕ್ಷಿಯನ್ನು ಧರಿಸಿ ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.