Index   ವಚನ - 78    Search  
 
ಸಮಾಧಿ ಸಮಾಧಿ ಎಂಬರಯ್ಯಾ, ಸಮಾಧಿಯ ಬಗೆಯ ಪೇಳ್ವೆ. ಅದೆಂತೆಂದಡೆ : ಪಂಚಭೂತಮಿಶ್ರವಾದ ದೇಹವೆಂಬುವುದೆ ಸಮಾಧಿ. ಅಂತಪ್ಪ ದೇಹದ ಪೃಥ್ವಿತತ್ವದಲ್ಲಿ ನಕಾರಪ್ರಣವ ಸ್ವಾಯತ. ಅಪ್ಪುತತ್ವದಲ್ಲಿ ಮಕಾರಪ್ರಣವ ಸ್ವಾಯತ. ತೇಜತತ್ವದಲ್ಲಿ ಶಿಕಾರಪ್ರಣವ ಸ್ವಾಯತ. ವಾಯುತತ್ವದಲ್ಲಿ ವಕಾರಪ್ರಣವ ಸ್ವಾಯತ. ಆಕಾಶತತ್ವದಲ್ಲಿ ಯಕಾರಪ್ರಣವ ಸ್ವಾಯತ. ಆತ್ಮದಲ್ಲಿ ಓಂಕಾರಪ್ರಣವ ಸ್ವಾಯತ. ಮತ್ತಂ, ಬಲಪಾದದಲ್ಲಿ ನಕಾರ, ಎಡಪಾದದಲ್ಲಿ ಮಕಾರ, ಮಧ್ಯನಾಭಿಸ್ಥಾನದಲ್ಲಿ ಶಿಕಾರ, ಬಲಹಸ್ತದಲ್ಲಿ ವಕಾರ, ಎಡಹಸ್ತದಲ್ಲಿ ಯಕಾರ, ಮಸ್ತಕದಲ್ಲಿ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಸ್ಥೂಲತನುವಿನಲ್ಲಿ ಬಕಾರಪ್ರಣವ ಸ್ವಾಯತ. ಸೂಕ್ಷ್ಮತನುವಿನಲ್ಲಿ ಸಕಾರಪ್ರಣವ ಸ್ವಾಯತ. ಕಾರಣತನುವಿನಲ್ಲಿ ವಕಾರಪ್ರಣವ ಸ್ವಾಯತ. ಮತ್ತಂ, ವಿಶ್ವನಲ್ಲಿ ಅಕಾರಪ್ರಣವಸಂಬಂಧ. ತೈಜಸನಲ್ಲಿ ಉಕಾರಪ್ರಣವಸಂಬಂಧ. ಪ್ರಾಜ್ಞದಲ್ಲಿ ಮಕಾರಪ್ರಣವಸಂಬಂಧ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಆಧಾರದಲ್ಲಿ ನಕಾರ, ಸ್ವಾಧಿಷ್ಠಾನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಬ್ರಹ್ಮರಂಧ್ರದಲ್ಲಿ ಬಕಾರ, ಅಕಾರ, ವಕಾರ, ಶಿಖೆಯಲ್ಲಿ ಕ್ಷಕಾರ, ಉಕಾರ, ಸಕಾರ. ಪಶ್ಚಿಮದಲ್ಲಿ ಹಕಾರ, ಮಕಾರ, ವಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದಲ್ಲಿ ಓಂಕಾರ, ಎಡಭಾಗದಲ್ಲಿ ಮಕಾರ, ಮುಂಭಾಗದಲ್ಲಿ ಅಕಾರ, ಹಿಂಭಾಗದಲ್ಲಿ ಮಕಾರ, ಊರ್ಧ್ವಭಾಗದಲ್ಲಿ ಹಕಾರ. ಮತ್ತಂ, ಬಲಹಸ್ತದ ಮಧ್ಯದಲ್ಲಿ ಓಂಕಾರ, ಹೆಬ್ಬೆರಳಿನಲ್ಲಿ ಯಕಾರ, ಉಳಿದ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಗಳು. ಆ ಹಸ್ತದ ಮೇಲುಭಾಗದಲ್ಲಿ ಅಕಾರ, ಮುಂಗೈಯಲಿ ಬಕಾರ, ಮೊಳಕೈಯಲ್ಲಿ ಉಕಾರ, ರಟ್ಟೆಯಲ್ಲಿ ಸಕಾರ, ಭುಜದಲ್ಲಿ ಮಕಾರ, ಹೆಗಲಲ್ಲಿ ವಕಾರ, ಇಂತೀ ಪರಿಯಲ್ಲಿ ಉಭಯ ಹಸ್ತ ತೋಳಿನಲ್ಲಿ ಹಿಂದೆ ಹೇಳಿದ ಪಂಚಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಉಭಯ ತಳಪಾದದಲ್ಲಿ ಓಂಕಾರ, ಉಭಯ ಪಾದಾಂಗುಷ್ಠದಲ್ಲಿ ಯಕಾರ, ಉಭಯ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಂಗಳು. ಉಭಯ ಪಾದದ ಮೇಲುಭಾಗದಲ್ಲಿ ಅಕಾರ, ಉಭಯ ಪಾದದ ಬಾಹ್ಯ ಹರಡಿನಲ್ಲಿ ಉಕಾರ, ಉಭಯ ಪಾದದಂತರ ಹರಡಿನಲ್ಲಿ ಬಕಾರ. ಉಭಯ ಪಾದದ ಹಿಂಬಡದಲ್ಲಿ ಮಕಾರ, ಉಭಯ ಕಣಕಾಲಲ್ಲಿ ಸಕಾರ, ಮೊಳಕಾಲಲ್ಲಿ ಪಕಾರ, ಉಭಯ ಕಿರಿದೊಡೆಯಲ್ಲಿ ಅಕಾರ. ಹಿರಿದೊಡೆಯಲ್ಲಿ ಉಕಾರ, ಉಭಯಾಂಗದಲ್ಲಿ ಮಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಉಭಯ ಬರಕಿಯಲ್ಲಿ ಓಂ ನಮಃಶಿವಾಯ ಎಂಬ ಮೂಲ ಷಡಕ್ಷರ. ಉಭಯ ಮೊಲೆಯಲ್ಲಿ ಓಂಕಾರ, ಉಭಯ ಬಗಲಲ್ಲಿ ಬಕಾರ, ಕಕ್ಷೆಯಲ್ಲಿ ಅಕಾರ, ಹೃದಯದಲ್ಲಿ ಉಕಾರ, ಕಂಠದಲ್ಲಿ ಮಕಾರ, ಹೆಡಕಿನಲ್ಲಿ ಸಕಾರ, ಹೆಡಕಿನ ಎಡಬಲದಲ್ಲಿ ವಕಾರ, ಉಭಯ ಕರ್ಣದ ಮಧ್ಯದಲ್ಲಿ ಓಂಕಾರ, ಹಾಲಿಯಲ್ಲಿ ಯಕಾರ, ಕಿರಿಹಾಲಿಯಲ್ಲಿ ವಕಾರ, ಕರ್ಣದ ಊರ್ಧ್ವಭಾಗದಲ್ಲಿ ಶಿಕಾರ, ಬಲ ಎಡಭಾಗದಲ್ಲಿ ಮಕಾರ, ಕರ್ಣದ ಹಿಂಭಾಗದಲ್ಲಿ ನಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದ ನಯನದಲ್ಲಿ ಅಕಾರ, ಬಕಾರ. ಎಡಭಾಗದ ನಯನದಲ್ಲಿ ಉಕಾರ, ಸಕಾರ, ಉಭಯ ನಯನದ ಮಧ್ಯದಲ್ಲಿ ಮಕಾರ, ವಕಾರ, ಉಭಯ ಗಲ್ಲದಲ್ಲಿ ಓಂಕಾರ. ನಾಶಿಕದ ತುದಿಯಲ್ಲಿ ಮಕಾರ. ಬಲಭಾಗದ ಹೊಳ್ಳಿಯಲ್ಲಿ ಅಕಾರ, ಎಡಭಾಗದ ಹೊಳ್ಳಿಯಲ್ಲಿ ಉಕಾರ. ಮೇಲುಭಾಗದ ತುಟಿಯಲ್ಲಿ ಬಕಾರ. ಕೆಳಭಾಗದ ತುಟಿಯಲ್ಲಿ ಸಕಾರ. ಉಭಯಮಧ್ಯದಲ್ಲಿ ವಕಾರ. ನಾಲಿಗೆಯಲ್ಲಿ ಓಂ ನಮಃಶಿವಾಯವೆಂಬ ಮೂಲ ಷಡಕ್ಷರ. ದಂತಪಂಕ್ತಿಗಳೇ ಹಂ ಕ್ಷಂ ಎಂಬ ಶೂನ್ಯಪ್ರಣಮಂಗಳು. ಚರ್ಮವೆ ವಕಾರ, ಅಸ್ತಿಯೇ ಮಕಾರ, ಮಾಂಸವೇ ಶಿಕಾರ, ಮಜ್ಜವೇ ವಕಾರ, ರಕ್ತವೇ ಯಕಾರ, ಪ್ರಾಣವೇ ಓಂಕಾರ. ರೇಚಕ ಪೂರಕ ಕುಂಭಕವೆಂಬ ಸ್ವರದಲ್ಲಿ ಅಕಾರ, ಉಕಾರ, ಮಕಾರ. ಮತ್ತಂ, ಅಪಾದಮಸ್ತಕದ ಪರಿಯಂತರವು ರೋಮನಾಳಂಗಳಲ್ಲಿ ನಿರಂಜನ ಮೂಲಪ್ರಣಮವೆಂಬ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣಮಸಂಬಂಧವಾದುದೇ ಸಮಾಧಿ. ಇಂತೀ ಕ್ರಮದಲ್ಲಿ ಕೀಯವಿಟ್ಟು ಬಾಹ್ಯದಲ್ಲಿ ದೇಹಕ್ಕೆ ಪ್ರಣಮಸಂಬಂಧಿಸಿದಡೆಯು ಆ ದೇಹವು ಭೂಮಿಯ ಮರೆಯಲ್ಲಿ ಒಂದು ಕ್ಷಣಕ್ಕೆ ನಿರ್ವಯಲಾಗುವುದು. ಇಂತೀ ಕ್ರಮದಲ್ಲಿ ಅಂತರಂಗದಲ್ಲಿ ಪ್ರಾಣಕ್ಕೆ ಪ್ರಣಮಸಂಬಂಧವ ಸುಜ್ಞಾನ ಕ್ರಿಯೆಗಳಿಂದ ಸಂಬಂಧಿಸಿದಡೆಯು ದೇಹದಲ್ಲಿರಲಿಕ್ಕೆಯು ಜೀವನ್ಮುಕ್ತನಾಗುವನು. ಅದೆಂತೆಂದಡೆ : ಚಿದಂಶಿಕನಾದ ಜ್ಞಾನಕಲಾತ್ಮಂಗೆ ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿ ಮಾಡಿ, ಶ್ರೀಗುರುಕಾರುಣ್ಯವ ಹಡೆದು ಅಂಗದ ಮೇಲೆ ಇಷ್ಟಲಿಂಗವು ಧಾರಣವಾದಾಕ್ಷಣವೇ ಹಿಂದೆ ಹೇಳಿದ ನಿರ್ಣಯದಲ್ಲಿ ಸರ್ವಾಂಗದಲ್ಲಿ ಮೂಲಪ್ರಣಮಾದಿ ಕ್ಷಕಾರ ಪ್ರಣಮಾಂತ್ಯವಾದ ಸಕಲನಿಃಷ್ಕಲಪ್ರಣಮಂಗಳು ಬೆಲ್ಲದ ಕುಳ್ಳಿಗೆ ಇರುವೆ ಮುತ್ತಿದಂತೆ ತನ್ನಿಂದ ತಾನೆ ಸಂಬಂಧವಾಗಿ ಜೀವನ್ಮುಕ್ತನಾಗಿ ಲೀಲೆಯಲ್ಲಿರುವ ಪರಿಯಂತರದಲ್ಲಿ ಉದಕದೊಳಗೆ ಇರ್ಪ ತಾವರೆಯಂತೆ ನಿರ್ಲೇಪನಾಗಿ ಪ್ರಪಂಚವನಾಚರಿಸುವನು. ಈ ಭೇದವನು ಶಿವಜ್ಞಾನಿ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.