Index   ವಚನ - 94    Search  
 
ಹಂದಿ, ಮೊಲ, ಪಶುವ ತಿಂದವನೇ ಭಕ್ತ. ಆನೆ, ಕುದುರೆ, ನಾಯಿಯ ತಿಂದವನೇ ಮಹೇಶ್ವರ. ಕೋಣ, ಎಮ್ಮೆ, ಹುಲಿಯ ತಿಂದವನೇ ಪ್ರಸಾದಿ. ಕೋಡಗ, ಸರ್ಪ, ಉಡವ ತಿಂದವನೇ ಪ್ರಾಣಲಿಂಗಿ. ಬೆಕ್ಕನು, ಹರಿಣವನು, ಕರುಗಳನು ತಿಂದವನೇ ಶರಣನು. ಹದ್ದು, ಕಾಗೆ, ಪಿಪೀಲಿಕನ ತಿಂದವನೇ ಐಕ್ಯ. ಇಂತೀ ಎಲ್ಲವ ಕೊಂದು ತಿಂದವನ ಕೊಂದು ಯಾರೂ ಇಲ್ಲದ ದೇಶಕ್ಕೆ ಒಯ್ದು ಅಗ್ನಿ ಇಲ್ಲದೇ ಸುಟ್ಟು, ನೀರಿಲ್ಲದೆ ಅಟ್ಟು, ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಪರಿಮಾಣವಿಲ್ಲದ ಹರಿವಾಣದಲ್ಲಿ ಗಡಣಿಸಿಕೊಂಡು, ಹಿಂದು ಮುಂದಿನ ಎಡಬಲದ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಸ್ವಸ್ಥ ಪದ್ಮಾಸನದಲ್ಲಿ ಮುಹೂರ್ತವ ಮಾಡಿ, ಏಕಾಗ್ರಚಿತ್ತಿನಿಂದ ಹಲ್ಲು ಇಲ್ಲದೆ ಮೆಲ್ಲಬಲ್ಲರೆ ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದಿ ಎಂಬೆನಯ್ಯಾ. ಇಂತೀ ಭೇದವನು ತಿಳಿಯದೆ ಭಕ್ತರ ಮನೆಯಲ್ಲಿ ಉನ್ನತಾಸನದ ಗದ್ದುಗೆಯ ಮೇಲೆ ಕುಳಿತು, ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ಗುರುಮೂರ್ತಿಗಳು, ಚರಮೂರ್ತಿಗಳು ಇಂತೀ ಉಭಯರು ಸತ್ತ ಶವದಿಂದತ್ತತ್ತ ನೋಡಾ. ಇಂತೀ ವಿಚಾರವನು ತಿಳಿಯದೆ ನಾವು ಪರಮವಿರಕ್ತರು, ಪಟ್ಟದಯ್ಯಗಳು, ಚರಮೂರ್ತಿಗಳು, ಗುರುಸ್ಥಲದ ಅಯ್ಯತನದ ಮೂರ್ತಿಗಳೆಂದು ಪಾದಪೂಜೆಯ ಮಾಡಿಸಿಕೊಂಡು ಪಾದವ ಪಾಲಿಸುವರೆಂದು ಭಕ್ತರಿಗೆ ತೀರ್ಥವೆಂದು ಕೊಡುವಂಥವರು ಬೀದಿಬಾಜಾರದಲ್ಲಿ ಕುಳಿತು ಸೆರೆಯ ಮಾರುವ ಹೆಂಡಗಾರರು ಇವರಿಬ್ಬರು ಸರಿ ಎಂಬೆ. ಇಂತೀ ನಿರ್ಣಯವನು ತಿಳಿಯದೆ ಭಕ್ತರನಡ್ಡಗೆಡಹಿಸಿಕೊಂಡು. ಪ್ರಸಾದವೆಂದು ತಮ್ಮ ಎಡೆಯೊಳಗಿನ ಕೂಳ ತೆಗೆದು ಕೈಯೆತ್ತಿ ನೀಡುವರು. ಪೇಟೆ ಬಜಾರ, ಬೀದಿಯಂಗಡಿ ಕಟ್ಟೆಯಲ್ಲಿ ಕುಳಿತು ಹೋತು ಕುರಿಗಳನು ಕೊಂದು ಅದರ ಕಂಡವನು ಕಡಿದು ತಕ್ಕಡಿಯಲ್ಲಿ ಎತ್ತಿ ತೂಗಿ ಮಾರುವ ಕಟುಕರು ಇವರಿಬ್ಬರು ಸರಿ ಎಂಬೆ. ಇಂತೀ ಭೇದವ ತಿಳಿಯದೆ ಗುರುಲಿಂಗಜಂಗಮವೆಂಬ ತ್ರಿಮೂರ್ತಿಗಳು ಪರಶಿವಸ್ವರೂಪರೆಂದು ಭಾವಿಸಿ ಪಾದೋದಕ ಪ್ರಸಾದವ ಕೊಂಬ ಭಕ್ತನು ಕೊಡುವಂತ ಗುರುಹಿರಿಯರು ಇವರ ಪಾದೋದಕ ಪ್ರಸಾದವೆಂತಾಯಿತಯ್ಯಾ ಎಂದಡೆ. ಹಳೆನಾಯಿ ಮುದಿಬೆಕ್ಕು ಸತ್ತ ಮೂರುದಿನದ ಮೇಲೆ ಆರಿಸಿಕೊಂಡು ಬಂದು ಅದರ ಜೀರ್ಣಮಾಂಸವನು ತಿಂದು ಬೆಕ್ಕು, ನಾಯಿ, ಹಂದಿಯ ಉಚ್ಚಿಯ ಕುಡಿದಂತಾಯಿತಯ್ಯಾ. ಇಂತಿದರನುಭಾವವನು ಸ್ವಾನುಭಾವಗುರುಮೂರ್ತಿಗಳಿಂದ ತನ್ನ ಸ್ವಯಾತ್ಮಜ್ಞಾನದಿಂದ ವಿಚಾರಿಸಿ ತಿಳಿದು ನೋಡಿ, ಇಂತಿವರೆಲ್ಲರೂ ಕೂಳಿಗೆ ಬಂದ ಬೆಕ್ಕು ನಾಯಿಗಳ ಹಾಗೆ ಅವರ ಒಡಲಿಗೆ ಕೂಳನು ಹಾಕಿ, ಬೆಕ್ಕು ನಾಯಿಗಳ ಅಟ್ಟಿದ ಹಾಗೆ ಅವರನು ಅಟ್ಟಬೇಕು ನೋಡಾ. ಇಂತಿವರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು. ಈ ಹೊಲೆಯ ಮಾದಿಗರ ಮೇಳಾಪವನು ಬಿಟ್ಟು ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಕೊಳಬಲ್ಲರೆ ಆ ಭಕ್ತರಿಗೆ ಮೋಕ್ಷವೆಂಬುದು ಕರತಳಾಮಳಕ ನೋಡೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.