Index   ವಚನ - 106    Search  
 
ಉದಯಕ್ಕೆ ತನುವೆಂಬ ಹಸ್ತದಲ್ಲಿ ಇಷ್ಟಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಮಧ್ಯಾಹ್ನಕ್ಕೆ ಮನವೆಂಬ ಹಸ್ತದಲ್ಲಿ ಪ್ರಾಣಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಅಸ್ತಮಾನಕ್ಕೆ ಧನವೆಂಬ ಹಸ್ತದಲ್ಲಿ ಭಾವಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ತನು ಮುಟ್ಟದ ಮುನ್ನ, ಮನ ಮುಟ್ಟದ ಮುನ್ನ, ಭಾವ ಮುಟ್ಟದ ಮುನ್ನ, ಲಿಂಗಕ್ಕೆ ದ್ರವ್ಯವ ಸಲಿಸಬಲ್ಲರೆ ಶರಣನೆಂಬೆ. ಕಾಲು ತಾಗದ ಮುನ್ನ, ಕೈ ಮುಟ್ಟದ ಮುನ್ನ ಉದಕವ ತಂದು ಲಿಂಗಕ್ಕೆ ಮಜ್ಜನವ ನೀಡಬಲ್ಲರೆ ಶರಣನೆಂಬೆ. ಹೂವು ನೋಡದ ಮುನ್ನ, ಹಸ್ತದಿಂದ ಮುಟ್ಟದ ಮುನ್ನ, ಹೂವ ಕೊಯಿದು ಧರಿಸಬಲ್ಲರೆ ಶರಣನೆಂಬೆ. ಈ ಭೇದವ ತಿಳಿಯಬಲ್ಲರೆ ಶಿವಜ್ಞಾನಿ ಶರಣ ಲಿಂಗಾಂಗಸಂಬಂಧಿ. ಇಂತೀ ನಿರ್ಣಯವ ತಿಳಿಯದೆ ಶರಣಸತಿ ಲಿಂಗಪತಿ ಎಂಬಾತನ ಲಿಂಗ ಪ್ರೇತಲಿಂಗ, ಅವ ಭೂತಪ್ರಾಣಿ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.